'ನಾನು ಒಂದು ಇಲ್ಲವೇ ಎರಡು ಬಾರಿ ಮಾತ್ರವೇ ಆರಂಭಿಕನಾಗಿ ಕಣಕ್ಕಿಳಿದಿದ್ದೇನೆ. ಆದರೆ, ಐಪಿಎಲ್‌ನಲ್ಲಿನ ಅಪಾರ ಅನುಭವ ಬೆನ್ನಿಗಿದೆ. ತಂಡಕ್ಕೆ ಅಗತ್ಯವೆನಿಸಿದರೆ, ಇನ್ನಿಂಗ್ಸ್ ಆರಂಭಿಸಲು ಹಿಂದೇಟು ಹಾಕಲಾರೆ'ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

ಕಾನ್ಪುರ(ಜ.25): ಆತಿಥೇಯ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಣ ಕ್ರಿಕೆಟ್ ಸರಣಿಯ ಕೊನೆಯ ಘಟ್ಟವಾದ ಮೂರು ಚುಟುಕು ಪಂದ್ಯ ಸರಣಿಗೆ ಗುರುವಾರ ಚಾಲನೆ ಸಿಗುತ್ತಿದ್ದು, ಮತ್ತೊಂದು ಸುತ್ತಿನ ಸತ್ವ ಪರೀಕ್ಷೆಗೆ ಇಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ರೆಡಿಯಾಗಿದೆ.

ಆತಿಥೇಯ ನೆಲದಲ್ಲಿ ನಡೆದ ಮೊದಲ ಹಂತದ ಐದು ಟೆಸ್ಟ್ ಪಂದ್ಯ ಸರಣಿಯನ್ನು 0-4ರಿಂದ ಸೋತ ಅಲೆಸ್ಟೈರ್ ಕುಕ್ ನಾಯಕತ್ವದ ಇಂಗ್ಲೆಂಡ್, ಆ ಬಳಿಕ ಸೀಮಿತ ಓವರ್‌ಗಳ ಸರಣಿಯಲ್ಲಿ ಮಾರ್ಗನ್ ನೇತೃತ್ವದಲ್ಲಿ ಜಯದ ಗುರಿ ಹೊತ್ತಿತ್ತಾದರೂ, ಮೊದಲ ಹಂತದಲ್ಲಿನ ಮೂರು ಏಕದಿನ ಪಂದ್ಯ ಸರಣಿಯನ್ನು 1-2ರಿಂದ ಕೈಚೆಲ್ಲಿತು. ಆದಾಗ್ಯೂ ಕೋಲ್ಕತಾದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ 5 ರನ್ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್ ಚುಟುಕು ಸರಣಿಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ.

ಹಿರಿ-ಕಿರಿಯರ ಸಂಮಿಶ್ರಣ

ಇಂಗ್ಲೆಂಡ್ ವಿರುದ್ಧದ ಈ ಚುಟುಕು ಸರಣಿಗೆ ಅಣಿಯಾಗಿರುವ ಟೀಂ ಇಂಡಿಯಾ ಒಂದು ವಿಧದಲ್ಲಿ ಹಿರಿಯ ಹಾಗೂ ಕಿರಿಯ ಆಟಗಾರರ ಸಂಗಮದಂತಿದೆ. ಯುವರಾಜ್ ಸಿಂಗ್, ಆಶೀಶ್ ನೆಹ್ರಾ, ಸುರೇಶ್ ರೈನಾ ಮತ್ತು ಅಮಿತ್ ಮಿಶ್ರಾ ಜತೆಗೆ ಯುವ ಆಟಗಾರರಾದ ರಿಷಭ್ ಪಂತ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ಪರ್ವೇಜ್ ರಸೂಲ್‌ರಂಥವರು ತಂಡದಲ್ಲಿದ್ದಾರೆ. ಅದರಲ್ಲೂ ರಿಷಭ್ ಪಂತ್, ಹಾರ್ದಿಕ್‌'ಗೆ ಈ ಸರಣಿ ಮಹತ್ವವೆನಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಏಕದಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಕನ್ನಡಿಗ ರಾಹುಲ್ ತೀವ್ರ ಒತ್ತಡದಲ್ಲಿದ್ದು, ಅವರು ಪುಟಿದೆದ್ದು ನಿಲ್ಲಬೇಕಿದೆ. ಇತ್ತ, ಸ್ಪಿನ್‌'ದ್ವಯರಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಿರುವುದು ತಂಡದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕಿದೆ. ಇನ್ನು ಡೆತ್ ಓವರ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಲು ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಸಜ್ಜಾಗಿದ್ದು, ಆ ದಿಸೆಯಲ್ಲಿ ಕಾರ್ಯತಂತ್ರ ಹೆಣೆದಿದೆ. ಕಳೆದ ಆರು ವರ್ಷಗಳಿಂದಲೂ ಐಪಿಎಲ್‌'ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಾ ಬಂದಿರುವ ಕೊಹ್ಲಿ, ಇಲ್ಲೀವರೆಗೆ 206 ಟಿ20 ಪಂದ್ಯಗಳಲ್ಲಿ ಆಡಿದ್ದು, 72ರಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಆದರೆ, ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಹೀಗಾಗಿ ಸಹಜವಾಗಿಯೇ ಶುಭಾರಂಭದ ಗುರಿ ಹೊತ್ತಿದ್ದಾರೆ.

ವಿಶ್ವಾಸದಲ್ಲಿ ಇಂಗ್ಲೆಂಡ್

ಭಾರತ ಪ್ರವಾಸದಲ್ಲಿನ ಮೊದಲೆರಡು ಸರಣಿಗಳನ್ನು ಸೋತು ಕಳೆಗುಂದಿರುವ ಇಂಗ್ಲೆಂಡ್, ಇದೀಗ ಚುಟುಕು ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಜೋ ರೂಟ್ ತಂಡಕ್ಕೆ ಲಭ್ಯವಿದ್ದರೂ, ಡೇವಿಡ್ ವಿಲ್ಲೆ, ಕ್ರಿಸ್ ವೋಕ್ಸ್ ಈ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಹೀಗಾಗಿ ಸಸೆಕ್ಸ್‌ನ ವೇಗಿಗಳಾದ ಕ್ರಿಸ್ ಜೋರ್ಡಾನ್ ಮತ್ತು ಟಿಮಲ್ ಮಿಲ್ಸ್ ಆಡುವ ಹನ್ನೊಂದರಲ್ಲಿ ಸ್ಥಾನ ಗಳಿಸುವ ಸಂಭವವಿದೆ. ಮೊದಲ ಕ್ರಮಾಂಕದಿಂದ ಕೊನೆಯ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡುವಷ್ಟು ಸಶಕ್ತ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡಿರುವ ಇಂಗ್ಲೆಂಡ್, ಬಾರಾಬತಿ ಮೈದಾನದಲ್ಲಿ ನಡೆಯಲಿರುವ ಈ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಆ ಮೂಲಕ ಶುಭಾರಂಭ ಮಾಡುವ ಭರವಸೆಯಲ್ಲಿದೆ.

ಸಂಭವನೀಯರ ಪಟ್ಟಿ

ಭಾರತ

ಕೆ.ಎಲ್. ರಾಹುಲ್, ಮನ್‌'ದೀಪ್ ಸಿಂಗ್/ರಿಷಭ್ ಪಂತ್, ವಿರಾಟ್ ಕೊಹ್ಲಿ (ನಾಯಕ), ಸುರೇಶ್ ರೈನಾ, ಯುವರಾಜ್ ಸಿಂಗ್, ಎಂ.ಎಸ್. ಧೋನಿ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಅಮಿತ್ ಮಿಶ್ರಾ / ಯಜುವೇಂದ್ರ ಚಾಹಲ್, ಪರ್ವೇಜ್ ರಸೂಲ್ / ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಹಾಗೂ ಆಶೀಶ್ ನೆಹ್ರಾ.

ಇಂಗ್ಲೆಂಡ್

ಜೇಸನ್ ರಾಯ್, ಸ್ಯಾಮ್ ಬಿಲ್ಲಿಂಗ್ಸ್, ಜೋ ರೂಟ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಇಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಕ್ರಿಸ್ ಜೋರ್ಡಾನ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್/ಜೇಕ್ ಬಾಲ್ ಮತ್ತು ಟಿಮಲ್ ಮಿಲ್ಸ್.

ಪಂದ್ಯ ಆರಂಭ: ಸಂಜೆ 4.30

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್