ಆತ ಹರ್ಯಾಣ ಬೌಲರ್​. ಆದ್ರೂ ಆತನಿಗೆ ಬೆಂಗಳೂರು 2ನೇ ತವರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಆತ 6 ವಿಕೆಟ್ ಪಡೆದು ಆಂಗ್ಲರ ಬೇಟೆಯಾಡಿದ್ದ. ನಾಳೆ ಕಾಂಗರೂ ಬೇಟೆಯಾಡಲು ರೆಡಿಯಾಗಿದ್ದಾನೆ. ಆತನೇ 4ನೇ ಪಂದ್ಯದ ಬೌಲಿಂಗ್ ಟ್ರಂಪ್​ಕಾರ್ಡ್​

ಯುಜವೇಂದ್ರ ಚಹಲ್ ಇತ್ತೀಚೆಗೆ ಟೀಂ ಇಂಡಿಯಾ ಬೌಲಿಂಗ್ ಟ್ರಂಪ್​ಕಾರ್ಡ್​ ಆಗ್ತಿದ್ದಾರೆ. ಆಡಿರೋದು ಕೇವಲ 17 ಇಂಟರ್​ನ್ಯಾಷನಲ್ ಮ್ಯಾಚ್. ಆಗ್ಲೇ ಎದುರಾಳಿ ಬೌಲರ್​ಗಳನ್ನ ಇನ್ನಿಲ್ಲದಂತೆ ಕಾಡ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆಯೋ ಮೂಲ್ಕ ಬ್ಯಾಟ್ಸ್​ಮನ್​ಗಳ ನಿದ್ದೆಗೆಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಭಾರತ-ಆಸೀಸ್ 4ನೇ ಪಂದ್ಯದಲ್ಲಿ ಅವರೇ ಬೌಲಿಂಗ್ ಟ್ರಂಪ್​ಕಾರ್ಡ್​.

ಚಹಲ್ ಮ್ಯಾಜಿಕ್​ಗೆ ಕಾಂಗರೂ ಉಡೀಸ್: ಯುಜವೇಂದ್ರಗೆ 3 ಪಂದ್ಯದಿಂದ 6 ವಿಕೆಟ್

ಆಸ್ಟ್ರೇಲಿಯಾ ವಿರುದ್ಧ ರಿಸ್ಟ್ ಸ್ಪಿನ್ನರ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಮೂರು ಮ್ಯಾಚ್​ನಿಂದ 6 ವಿಕೆಟ್ ಪಡೆಯೋ ಮೂಲ್ಕ ಕಾಂಗರೂಗಳ ಬೇಟೆಯಾಡಿದ್ದಾರೆ. ಚೆನ್ನೈನಲ್ಲಿ 3 ವಿಕೆಟ್ ಕಬಳಿಸಿದ್ದ ಚಹಲ್, ಕೋಲ್ಕತ್ತಾದಲ್ಲಿ 2 ವಿಕೆಟ್ ಉರುಳಿಸಿದ್ದರು. ಇಂದೋರ್​ನಲ್ಲಿ ಏಕೈಕ ವಿಕೆಟ್ ಪಡೆದಿದ್ದರು. ಎಲ್ಲ ಮೂರು ಪಂದ್ಯದಲ್ಲೂ ಗ್ಲೇನ್ ಮ್ಯಾಕ್ಸ್​​ವೆಲ್ ವಿಕೆಟ್ ಪಡೆದಿರೋದು ವಿಶೇಷ.

ಬೆಂಗಳೂರಿನಲ್ಲಿ ಆಂಗ್ಲರ ಬೇಟೆಯಾಡಿದ್ದ ಚಹಲ್: ಭಾರತದ ಪರ ಬೆಸ್ಟ್​ ವಿಕೆಟ್ ಟೇಕರ್ ಆಗಿದ್ದು ಬೆಂಗಳೂರಿನಲ್ಲೇ

ಬೆಂಗಳೂರಿನಲ್ಲಿ ಇದೇ ವರ್ಷ ಫೆಬ್ರವರಿ 1ರಂದು ಭಾರತ-ಇಂಗ್ಲೆಂಡ್ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ 202 ರನ್​ ಬಾರಿಸಿತ್ತು. ಇಂಗ್ಲೆಂಡ್ ಸಹ ಉತ್ತಮವಾಗಿ ಚೇಸ್ ಮಾಡ್ತಿತ್ತು. ಆದ್ರೆ ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ್ದು ಇದೇ ಯುಜವೇಂದ್ರ ಚಹಲ್. ಅಂದು 6 ವಿಕೆಟ್ ಪಡೆಯೋ ಮೂಲ್ಕ ಆಂಗ್ಲರ ಬೇಟೆಯಾಡಿಬಿಟ್ಟಿದ್ದರು. 4 ಓವರ್​ನಲ್ಲಿ 25 ರನ್ ನೀಡಿ 6 ವಿಕೆಟ್ ಪಡೆದು, ಟೀಂ ಇಂಡಿಯಾ ಪರ ಬೆಸ್ಟ್​ ಬೌಲರ್ ಎನಿಸಿಕೊಂಡಿದ್ದರು.

ಹರ್ಯಾಣ ಬೌಲರ್​ಗೆ ಬೆಂಗಳೂರು 2ನೇ ತವರು. ಐಪಿಎಲ್​​ನಲ್ಲಿ ಆರ್​ಸಿಬಿ ಪರ ಆಡುವ ಚಹಲ್, ಬೆಂಗಳೂರು ಪಿಚ್​ನಲ್ಲಿ ಉತ್ತಮ ಪ್ರದರ್ಶನ ನೀಡ್ತಾರೆ. ಸದ್ಯ ಅದ್ಭುತ ಫಾರ್ಮ್​ನಲ್ಲಿರುವ ಚಹಾಲ್, ಇಲ್ಲೂ ಕಾಂಗರೂ ಬೇಟೆಯಾಡಲು ಸಜ್ಜಾಗಿದ್ದಾರೆ. ಬೆಂಗಳೂರಿನಲ್ಲಿ ಚಹಲ್ ಫರ್ಫಾಮೆನ್ಸ್ ನೋಡಿ ಆಗ್ಲೇ ಆಸ್ಟ್ರೇಲಿಯನ್ನರು ಬೆಚ್ಚಿಬಿದ್ದಿದ್ದಾರೆ. ಈಗ ಏನಿದ್ದರೂ ಚಹಲ್ ಮ್ಯಾಜಿಕ್ ನೋಡೋದೊಂದೇ ಬಾಕಿ.