WFI Elections: ಡಿಸೆಂಬರ್ 8ರ ಬಳಿಕ ಕುಸ್ತಿ ಸಂಸ್ಥೆ ಎಲೆಕ್ಷನ್ ದಿನಾಂಕ ನಿಗದಿ
ಈ ಮೊದಲು ಜುಲೈನಲ್ಲಿ ಮೊದಲ ಬಾರಿ ಚುನಾವಣೆ ನಿಗದಿಯಾಗಿದ್ದರೂ ಹಲವು ಕಾರಣಗಳಿಂದಾಗಿ ಮುಂದೂಡುತ್ತಲೇ ಬಂದಿತ್ತು. ಆಗಸ್ಟ್‌ನಲ್ಲಿ ಪಂಜಾಬ್-ಹರ್ಯಾಣ ಹೈಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಇತ್ತೀಚೆಗಷ್ಟೇ ತಡೆಯಾಜ್ಞೆ ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ಚುನಾವಣೆಗೆ ಹಸಿರು ನಿಶಾನೆ ತೋರಿಸಿತ್ತು.
ನವದೆಹಲಿ(ಡಿ.06): ಹಲವು ಬಾರಿ ಮುಂದೂಡಿಕೆಯಾಗಿರುವ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆಗೆ ಡಿ.8ರಂದು ಅಥವಾ ಆ ಬಳಿಕ ದಿನಾಂಕ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಮೊದಲು ಜುಲೈನಲ್ಲಿ ಮೊದಲ ಬಾರಿ ಚುನಾವಣೆ ನಿಗದಿಯಾಗಿದ್ದರೂ ಹಲವು ಕಾರಣಗಳಿಂದಾಗಿ ಮುಂದೂಡುತ್ತಲೇ ಬಂದಿತ್ತು. ಆಗಸ್ಟ್‌ನಲ್ಲಿ ಪಂಜಾಬ್-ಹರ್ಯಾಣ ಹೈಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಇತ್ತೀಚೆಗಷ್ಟೇ ತಡೆಯಾಜ್ಞೆ ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ಚುನಾವಣೆಗೆ ಹಸಿರು ನಿಶಾನೆ ತೋರಿಸಿತ್ತು.
ಕಿರಿಯರ ಹಾಕಿ ವಿಶ್ವಕಪ್: ಭಾರತಕ್ಕೆ 4-2 ಗೆಲುವು
ಕೌಲಾಲಂಪುರ(ಮಲೇಷ್ಯಾ): ಎಫ್‌ಐಎಚ್ ಕಿರಿಯ ಪುರುಷರ ಹಾಕಿ ವಿಶ್ವಕಪ್‌ನಲ್ಲಿ 2 ಬಾರಿ ಚಾಂಪಿಯನ್ ಭಾರತ ಶುಭಾರಂಭ ಮಾಡಿದೆ. ಮಂಗಳವಾರ ‘ಸಿ’ ಗುಂಪಿನ ಮೊದಲ ಪಂದ್ಯಲ್ಲಿ ಭಾರತಕ್ಕೆ ಕೊರಿಯಾ ವಿರುದ್ಧ 4-2 ಗೋಲುಗಳ ಗೆಲುವು ಲಭಿಸಿತು. ಅರೈಜಿತ್ ಸಿಂಗ್ ಹ್ಯಾಟ್ರಿಕ್ ಗೋಲು ಬಾರಿಸಿ ಗೆಲುವಿನ ರೂವಾರಿಯಾದರೆ, ಮತ್ತೊಂದು ಗೋಲನ್ನು ಅಮನ್‌ದೀಪ್ ದಾಖಲಿಸಿದರು. ಮೊದಲಾರ್ಧದಲ್ಲೇ 3-0 ಮುನ್ನಡೆ ಸಾಧಿಸಿದ್ದ ಭಾರತ, ಯಾವುದೇ ಕ್ಷಣದಲ್ಲೂ ಪಂದ್ಯ ಕೈಜಾರದಂತೆ ನೋಡಿಕೊಂಡಿತು. ಕಳೆದ ಬಾರಿ 4ನೇ ಸ್ಥಾನಿಯಾಗಿದ್ದ ಭಾರತ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಗುರುವಾರ ಸ್ಪೇನ್ ವಿರುದ್ಧ ಆಡಲಿದೆ.
ಬೆಂಗಳೂರಲ್ಲಿ ಇಂದಿನಿಂದ ದಿಗ್ಗಜ ವಾಲಿಬಾಲ್ ಆಟಗಾರರ ಶೋ!
ಡೆಲ್ಲಿ ಕ್ರೀಡಾಕೂಟದ 100 ಮೀ. ಫೈನಲ್‌ನಲ್ಲಿ ಓಡಿದ್ದ ಏಕೈಕ ಸ್ಪರ್ಧಿಯೂ ಡೋಪ್ ಟೆಸ್ಟ್ ಫೇಲ್!
ನವದೆಹಲಿ: ಇತ್ತೀಚೆಗೆ ದೆಹಲಿಯ ರಾಜ್ಯ ಕ್ರೀಡಾಕೂಟದಲ್ಲಿ ಉದ್ದೀಪನ ಮದ್ದು (ಡೋಪ್) ಪರೀಕ್ಷೆಗೆ ಹೆದರಿ ಉಳಿದೆಲ್ಲಾ ಸ್ಪರ್ಧಿಗಳು 100 ಮೀ. ಫೈನಲ್‌ನಿಂದ ತಪ್ಪಿಸಿಕೊಂಡರೂ, ಲಲಿತ್ ಕುಮಾರ್ ಎಂಬ ಏಕೈಕ ಸ್ಪರ್ಧಿ ಓಟದಲ್ಲಿ ಪಾಲ್ಗೊಂಡಿದ್ದು ಸುದ್ದಿಯಾಗಿತ್ತು. ಅಚ್ಚರಿ ಎಂಬಂತೆ ಸದ್ಯ ಲಲಿತ್ ಕೂಡಾ ಡೋಪ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದಾರೆ.
ಸೆಪ್ಟೆಂಬರ್ 26ರಂದು ಸ್ಪರ್ಧೆಯ ದಿನ ಕ್ರೀಡಾಂಗಣದ ಶೌಚಾಲಯ ಬಳಿ ಬಳಸಿದ ಸಿರಿಂಜ್‌ಗಳು ಪತ್ತೆಯಾಗಿದ್ದರಿಂದ ನಾಡಾ ಅಧಿಕಾರಿಗಳು ಡೋಪ್ ಟೆಸ್ಟ್‌ಗೆ ಆಗಮಿಸಿ, ಲಲಿತ್‌ರ ರಕ್ತದ ಮಾದರಿ ಸಂಗ್ರಹಿಸಿದ್ದರು. ಸದ್ಯ ಅವರ ವರದಿಯಲ್ಲಿ ನಿಷೇಧಿತ ಮದ್ದು ಸೇವಿಸಿದ್ದು ಪತ್ತೆಯಾಗಿದೆ. ಆದರೆ ಇದನ್ನು ಲಲಿತ್ ನಿರಾಕರಿಸಿದ್ದು, ಇದರ ಹಿಂದೆ ಕೋಚ್‌ಗಳ ಕೈವಾಡವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ‘ನಾನು ನಿಷೇಧಿತ ಮದ್ದು ಸೇವಿಸಿದ್ದರೆ, ಫೈನಲ್‌ಗೂ ಮುನ್ನ ನಾನೂ ಓಡಿ ಹೋಗುತ್ತಿದೆ. ಆದರೆ ನಾನು ಧೈರ್ಯವಾಗಿ ಒಬ್ಬನೇ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ನನ್ನಿಂದ ಯಾವ ತಪ್ಪೂ ಆಗಿಲ್ಲ’ ಎಂದು ಲಲಿತ್ ಹೇಳಿದ್ದಾರೆ.
ಪ್ಯಾರಾ ಅಥ್ಲೆಟಿಕ್ಸ್: ಡಿಸೆಂಬರ್ 22ಕ್ಕೆ ಟ್ರಯಲ್ಸ್
ಬೆಂಗಳೂರು: ಜನವರಿ 09ರಿಂದ 13ರ ವರೆಗೆ ಗೋವಾದಲ್ಲಿ 22ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯು ತುಮಕೂರು ಜಿಲ್ಲಾ ಅಂಗವಿಕಲರ ಸಂಸ್ಥೆಯ ಸಹಭಾಗಿತ್ವದಲ್ಲಿ ಡಿಸೆಂಬರ್ 22ರಂದು ಆಯ್ಕೆ ಟ್ರಯಲ್ಸ್ ಆಯೋಜಿಸಿದೆ. ಆಸಕ್ತರು entriesksaph@gmail.com ಗೆ ಡಿಸೆಂಬರ್ 18ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.