Wrestlers Protest ಒಂದೇ ಒಂದು ಆರೋಪ ಸಾಬೀತಾದರೆ ನೇಣಿಗೆ: ಬ್ರಿಜ್‌ಭೂಷಣ್ ಸವಾಲು!
ಜಂತರ್ ಮಂತರ್‌ನಲ್ಲಿ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಒಂದೇ ಒಂದು ಆರೋಪ ಸಾಬೀತು ಮಾಡಲಿ
ಕುಸ್ತಿಪಟುಗಳಿಗೆ ಕುಸ್ತಿ ಸಂಸ್ಥೆ ಅಧ್ಯಕ್ಷನ ಸವಾಲು
ನವದೆಹಲಿ(ಮೇ.08): ಕುಸ್ತಿಪಟುಗಳು ಹಾಗೂ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ನಡುವಿನ ಹಗ್ಗಜಗ್ಗಾಟ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಸವಾಲು-ಪ್ರತಿಸವಾಲು ಮುಂದುವರಿಯುತ್ತಿದ್ದು, ಇದೀಗ ಭೂಷಣ್ ವಿಡಿಯೋ ಸಂದೇಶವೊಂದರ ಮೂಲಕ ಮತ್ತೊಂದು ಸವಾಲು ಹಾಕಿದ್ದಾರೆ. ಭಾನುವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಭೂಷಣ್, ‘ಪ್ರತಿಭಟನಾ ನಿರತ ಕುಸ್ತಿಪಟುಗಳು ತಾವು ಮಾಡಿರುವ ಆರೋಪಗಳ ಪೈಕಿ ಒಂದೇ ಒಂದು ಆರೋಪವನ್ನು ಸಾಬೀತು ಮಾಡಲಿ ಸಾಕು. ನಾನು ನೇಣು ಬಿಗಿದುಕೊಳ್ಳುತ್ತೇನೆ’ ಎಂದಿದ್ದಾರೆ.
‘ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಹೆಚ್ಚಿಗೆ ಮಾತನಾಡುವುದಿಲ್ಲ. ಕಳೆದ 11 ವರ್ಷದಲ್ಲಿ ದೇಶದಲ್ಲಿ ಕುಸ್ತಿ ಅಭಿವೃದ್ಧಿಗಾಗಿ ನಾನು ಏನೆಲ್ಲಾ ಮಾಡಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ವಿರುದ್ಧ ಯಾವುದಾದರೂ ವಿಡಿಯೋ, ಆಡಿಯೋ, ಸಾಕ್ಷ್ಯಗಳು ಇದ್ದರೆ ಪೊಲೀಸರಿಗೆ ನೀಡಲಿ’ ಎಂದು ಸವಾಲು ಹಾಕಿದ್ದಾರೆ.
ಕುಸ್ತಿಪಟುಗಳ ವಿರುದ್ಧ ಕೇಂದ್ರ ಸರ್ಕಾರ ಗರಂ!
ಬ್ರಿಜ್‌ಭೂಷಣ್ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ತಮ್ಮ ಪದಕ, ಪ್ರಶಸ್ತಿಗಳನ್ನು ವಾಪಸ್ ನೀಡುವುದಾಗಿ ಬೆದರಿಕೆ ಹಾಕಿರುವ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿ ಇತರರ ವಿರುದ್ಧ ಕೇಂದ್ರ ಸರ್ಕಾರ ಗರಂ ಆಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರ ಕಳೆದ 5 ವರ್ಷದಲ್ಲಿ ಕುಸ್ತಿಪಟುಗಳಿಗಾಗಿ 150 ಕೋಟಿ ರು.ಗೂ ಹೆಚ್ಚು ವೆಚ್ಚ ಮಾಡಿದೆ ಎಂದಿರುವ ಅಧಿಕಾರಿಯೊಬ್ಬರು, ವಿಸ್ತೃತ ವಿವರ ನೀಡಿದ್ದಾರೆ.
Wrestlers Protest: ಈಗ ಕುಸ್ತಿಪಟುಗಳಿಂದ 2 ಸಮಿತಿ!
‘ಸಾರ್ವಜನಿಕರ ತೆರಿಗೆ ಹಣದಿಂದ ಕುಸ್ತಿಪಟುಗಳಿಗೆ ಕೋಟ್ಯಂತರ ರುಪಾಯಿ ನೆರವು ನೀಡಲಾಗಿದೆ. ಕಳೆದ 5 ವರ್ಷದಲ್ಲಿ ಕುಸ್ತಿಪಟುಗಳ ಅಭ್ಯಾಸ, ತರಬೇತಿ, ಸ್ಪರ್ಧೆಗೆ 150 ಕೋಟಿ ರು.ಗೂ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ. ಭಜರಂಗ್‌ಗೆ 2.58 ಕೋಟಿ ರು., ವಿನೇಶ್‌ಗೆ 2.16 ಕೋಟಿ ರು. ನೆರವು ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮ್ಯಾಜಿಸ್ಪ್ರೇಟ್ ಮುಂದೆ ಹೇಳಿಕೆ ದಾಖಲಿಸಿಲ್ಲ: ಸಾಕ್ಷಿ ಮಲಿಕ್
ಬ್ರಿಜ್‌ಭೂಷಣ್ ವಿರುದ್ಧ ದೂರು ನೀಡಿದ ಬಾಲಕಿಯರ ಹೇಳಿಕೆಯನ್ನೂ ಇನ್ನೂ ದಾಖಲಿಸಿಲ್ಲ. ಮ್ಯಾಜಿಸ್ಪ್ರೇಟ್ ಮುಂದೆ ಅವರು ಹೇಳಿಕೆ ದಾಖಲಿಸಬೇಕು. ಅದಕ್ಕಾಗಿಯೇ ನಾವು ಕಾಯುತ್ತಿದ್ದೇವೆ. ಹೇಳಿಕೆ ದಾಖಲಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಒತ್ತಾಯಿಸಿದ್ದಾರೆ.
ಬ್ರಿಜ್ ಬಂಧನಕ್ಕೆ ಮೇ 21ರ ಗಡುವು ಕೊಟ್ಟ ಕುಸ್ತಿಪಟುಗಳು!
ಬ್ರಿಜ್‌ಭೂಷಣ್‌ರನ್ನು ಮೇ 21ರೊಳಗೆ ಬಂಧಿಸದಿದ್ದರೆ ಪ್ರತಿಭಟನೆಯು ಉಗ್ರರೂಪ ಪಡೆಯಲಿದೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದಾರೆ. ಮುಂದಿನ ನಡೆ ಬಗ್ಗೆ ನಿರ್ಧರಿಸಲು ರಚಿಸಿದ್ದ 31 ಸದಸ್ಯರ ಸಮಿತಿಯ ಸಲಹೆಯ ಮೇರೆಗೆ ಕುಸ್ತಿಪಟುಗಳು ಈ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಕುಸ್ತಿಪಟುಗಳಿಗೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಬೆಂಬಲ ದೊರೆಯುತ್ತಿದ್ದು, ಭಾನುವಾರ 2000ಕ್ಕೂ ಹೆಚ್ಚು ಮಂದಿ ಪ್ರತಿಭಟನೆ ನಡೆಯುತ್ತಿರುವ ಜಂತರ್-ಮಂತರ್‌ಗೆ ಭೇಟಿ ನೀಡಿದರು.
ರೈತ ಮುಖಂಡ ರಾಕೇಶ್ ಟಿಕಾಯತ್ ಸೇರಿ ಹಲವರು ಪ್ರಮುಖರು ಭೇಟಿ ನೀಡಿ ಬ್ರಿಜ್‌ಭೂಷಣ್ ವಿರುದ್ಧ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿನೇಶ್ ಫೋಗಾಟ್, ‘ಪ್ರತಿಭಟನೆಯನ್ನು ಯಾರೂ ಹೈಜ್ಯಾಕ್ ಮಾಡಿಲ್ಲ’ ಎಂದಿದ್ದಾರೆ.