ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್: ಪ್ರಿ ಕ್ವಾರ್ಟರ್ಗೇರಿದ ಆಲ್ಕರಜ್, ಇಗಾ!
ಪ್ರಿ ಕ್ವಾರ್ಟರ್ ಹಂತಕ್ಕೆ ಲಗ್ಗೆಯಿಟ್ಟ ವಿಶ್ವ ನಂ.1 ಟೆನಿಸಿಗ ಕಾರ್ಲೋಸ್ ಆಲ್ಕರಜ್
ಸಿಟ್ಸಿಪಾಸ್, ರುಡ್ ಕೂಡಾ ಅಂತಿಮ 16ರ ಘಟ್ಟಕ್ಕೆ
ಅನಾರೋಗ್ಯದಿಂದ ರಬೈಕೆನಾ ಗುಡ್ಬೈ
ಪ್ಯಾರಿಸ್(ಜೂ.04): ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಳ್ಳುತ್ತಿರುವ ವಿಶ್ವ ನಂ.1 ಟೆನಿಸಿಗರಾದ ಕಾರ್ಲೋಸ್ ಆಲ್ಕರಜ್ ಹಾಗೂ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗ್ರೀಕ್‌ನ ಸ್ಟೆಫಾನೊಸ್ ಸಿಟ್ಸಿಪಾಸ್, ನಾರ್ವೆಯ ಕ್ಯಾಸ್ಪೆರ್ ರುಡ್ ಕೂಡಾ ಅಂತಿಮ 16ರ ಘಟ್ಟತಲುಪಿದ್ದಾರೆ.
ಶನಿವಾರ ಮಹಿಳಾ ಸಿಂಗಲ್ಸ್ನ 3ನೇ ಸುತ್ತಿನ ಹಣಾಹಣಿಯಲ್ಲಿ ಪೋಲೆಂಡ್‌ನ ಸ್ವಿಯಾಟೆಕ್ ಚೀನಾದ ವ್ಯಾಂಗ್ ಕ್ಷಿನ್ಯು ವಿರುದ್ಧ 6-0, 6-0 ಸುಲಭ ಗೆಲುವು ದಾಖಲಿಸಿದರು. ಇದಕ್ಕೂ ಮುನ್ನ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ 3ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಯುಎಸ್ ಓಪನ್ ಚಾಂಪಿಯನ್, ಸ್ಪೇನ್‌ನ ಆಲ್ಕರಜ್ ಕೆನಡಾದ ಡೆನಿಸ್ ಶಪೋವಲೊವ್ ವಿರುದ್ಧ 6-1, 6-4, 6-2 ನೇರ ಗೇಮ್ಗಳಲ್ಲಿ ಜಯಭೇರಿ ಬಾರಿಸಿದರು. ಮುಂದಿನ ಸುತ್ತಿನಲ್ಲಿ 20ರ ಹರೆಯದ ಆಲ್ಕರಜ್ಗೆ ಇಟಲಿಯ ಲೊರೆಂಜೊ ಮುಸೆಟ್ಟಿಸವಾಲು ಎದುರಾಗಲಿದೆ. ಇದೇ ವೇಳೆ ಗ್ರೀಕ್‌ನ 2021ರ ರನ್ನರ್-ಅಪ್ ಸಿಟ್ಸಿಪಾಸ್ ಅರ್ಜೆಂಟೀನಾದ ಡಿಯಾಗೊ ಸ್ವಾಟ್್ಜಮನ್ ವಿರುದ್ಧ 6-2, 6-2, 6-3 ಗೇಮ್ಗಳಲ್ಲಿ ಗೆಲುವು ಸಾಧಿಸಿದರೆ, ಕಳೆದ ಬಾರಿ ಫೈನಲ್ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿದ್ದ ರುಡ್ ಚೀನಾದ ಝಾಂಗ್‌ರನ್ನು 4-6, 6-4, 6-1, 6-4 ಅಂತರದಲ್ಲಿ ಸೋಲಿಸಿ ಪ್ರಿ ಕ್ವಾರ್ಟರ್ಗೇರಿದರು. 6ನೇ ಶ್ರೇಯಾಂಕಿತ, ಡೆನ್ಮಾರ್ಕ್ನ ಹೋಲ್ಗರ್ ರ್ಯೂನ್ ಅರ್ಜೆಂಟೀನಾದ ಆಲ್ಬೆರ್ಟೋ ವಿರುದ್ಧ ಜಯಗಳಿಸಿದರು.
ಅನಾರೋಗ್ಯದಿಂದ ರಬೈಕೆನಾ ಗುಡ್ಬೈ!
ಹಾಲಿ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ ಎಲೆನಾ ರಬೈಕೆನಾ ಅನಾರೋಗ್ಯದಿಂದಾಗಿ ಫ್ರೆಂಚ್ ಓಪನ್‌ನಿಂದ ಹೊರಗುಳಿದಿದ್ದಾರೆ. ಅವರು ಸ್ಪೇನ್‌ನ ಸಾರಾ ಸೊರಿಬೆಸ್ ವಿರುದ್ಧ ಶನಿವಾರ ಮಹಿಳಾ ಸಿಂಗಲ್ಸ್ 3ನೇ ಸುತ್ತಿನ ಪಂದ್ಯವಾಡಬೇಕಿತ್ತು. ಆದರೆ ಜ್ವರದಿಂದ ಬಳಲುತ್ತಿದ್ದ ರಬೈಕೆನಾ ಆಡದಿರಲು ನಿರ್ಧರಿಸಿದರು. ‘ಕಳೆದೆರಡು ದಿನ ರಾತ್ರಿ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಹೀಗಾಗಿ ಸರಿಯಾಗಿ ಉಸಿರಾಡಲೂ ಆಗುತ್ತಿಲ್ಲ’ ಎಂದು ಸ್ಪರ್ಧೆಗೂ ಮುನ್ನ ರಬೈಕೆನಾ ತಿಳಿಸಿದರು.
French Open 2023: ಪ್ರಿ ಕ್ವಾರ್ಟರ್ಗೇರಿದ ನೋವಾಕ್ ಜೋಕೋವಿಚ್
ರಾಫಾಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಪ್ಯಾರಿಸ್: ದೀರ್ಘ ಕಾಲದಿಂದ ಸೊಂಟದ ನೋವಿನಿಂದ ಬಳಲುತ್ತಿರುವ 22 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸ್ಪೇನ್ ರಾಫೆಲ್ ನಡಾಲ್ ಶುಕ್ರವಾರ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದನ್ನು ನಡಾಲ್ರ ವ್ಯವಸ್ಥಾಪಕ ತಂಡ ಖಚಿತಪಡಿಸಿದ್ದು, ಶೀಘ್ರ ಗುಣಮುಖರಾಗಲು 2-3 ತಿಂಗಳು ಬೇಕಾಗಬಹುದು ಎಂದು ತಿಳಿಸಿದೆ. ನಡಾಲ್ ಈ ವರ್ಷ ಜನವರಿಯಲ್ಲಿ ಆಸ್ಪ್ರೇಲಿಯನ್ ಓಪನ್ನಲ್ಲಿ ಕೊನೆ ಬಾರಿ ಆಡಿದ್ದರು. ಆ ಬಳಿಕ ಗಾಯದಿಂದಾಗಿ ಯಾವುದೇ ಸ್ಪರ್ಧಾತ್ಮಕ ಟೆನಿಸ್ ಆಡಿಲ್ಲ. ನಡಾಲ್ 2005ರ ಬಳಿಕ ಇದೇ ಮೊದಲ ಬಾರಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡುತ್ತಿಲ್ಲ.