ಇಂದಿನಿಂದ ನವದೆಹಲಿಯಲ್ಲಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್
13ನೇ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ಗೆ ನವದೆಹಲಿ ಆತಿಥ್ಯ
65 ದೇಶಗಳ 300ಕ್ಕೂ ಅಧಿಕ ಮಹಿಳಾ ಬಾಕ್ಸರ್‌ಗಳು ಕೂಟದಲ್ಲಿ ಭಾಗಿ
ಭಾರತದ 12 ಸ್ಪರ್ಧಿಗಳು ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ
ನವದೆಹಲಿ(ಮಾ.16): 13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಗುರುವಾರದಿಂದ ನವದೆಹಲಿಯಲ್ಲಿ ಆರಂಭವಾಗಲಿದ್ದು, 65 ದೇಶಗಳ 300ಕ್ಕೂ ಹೆಚ್ಚು ಬಾಕ್ಸರ್‌ಗಳು ಸ್ಪರ್ಧಿಸಲಿದ್ದಾರೆ. ಭಾರತದ 12 ಸ್ಪರ್ಧಿಗಳು ಕಣಕ್ಕಿಳಿಯಲಿದ್ದು, ಹಾಲಿ ಚಾಂಪಿಯನ್ ನಿಖಾತ್ ಜರೀನ್(50 ಕೆ.ಜಿ.), ಒಲಿಂಪಿಕ್ಸ್ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್(75 ಕೆ.ಜಿ.) ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಕಳೆದ ಆವೃತ್ತಿಯಲ್ಲಿ ಭಾರತ 1 ಚಿನ್ನ ಸೇರಿ 3 ಪದಕ ಗೆದ್ದಿತ್ತು. 2006ರಲ್ಲಿ ತವರಿನಲ್ಲೇ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನ ಸೇರಿ 8 ಪದಕ ಗೆದ್ದಿದ್ದು ಭಾರತದ ಈವರೆಗಿನ ಶ್ರೇಷ್ಠ ಸಾಧನೆ. ಆ ದಾಖಲೆಯನ್ನು ಉತ್ತಮಗೊಳಿಸಲು ಭಾರತೀಯ ಬಾಕ್ಸರ್‌ಗಳು ಎದುರು ನೋಡುತ್ತಿದ್ದಾರೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಈ ಸಲ ಸ್ಪರ್ಧಿಸುತ್ತಿಲ್ಲ.
ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ಬಾಕ್ಸರ್‌ಗಳಿಗೆ ತಲಾ 1 ಲಕ್ಷ ಅಮೆರಿಕನ್ ಡಾಲರ್(ಅಂದಾಜು 82.75 ಲಕ್ಷ ರು.) ಬಹುಮಾನ ಸಿಗಲಿದೆ. ಬೆಳ್ಳಿ ವಿಜೇತರಿಗೆ ತಲಾ 41.37 ಲಕ್ಷ, ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಡುವ ಇಬ್ಬರೂ ಬಾಕ್ಸರ್‌ಗಳಿಗೆ ತಲಾ 20.68 ಲಕ್ಷ ರು. ಬಹುಮಾನ ಮೊತ್ತ ದೊರೆಯಲಿದೆ.
ಹಾಕಿ: ಆಸೀಸ್ ವಿರುದ್ಧ ಶೂಟೌಟಲ್ಲಿ ಗೆದ್ದ ಭಾರತ
ರೂರ್ಕೆಲಾ: ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ತನ್ನ ಜಯದ ಲಯ ಮುಂದುವರಿಸಿದ್ದು, ಬುಧವಾರ ಆಸ್ಪ್ರೇಲಿಯಾ ವಿರುದ್ಧ ಪೆನಾಲ್ಟಿಶೂಟೌಟ್‌ನಲ್ಲಿ 4-3ರ ಗೆಲುವು ಸಾಧಿಸಿತು. ನಿಗದಿತ 60 ನಿಮಿಷಗಳ ಮುಕ್ತಾಯಕ್ಕೆ ಎರಡೂ ತಂಡಗಳು 2-2ರಲ್ಲಿ ಸಮಬಲ ಸಾಧಿಸಿದ್ದವು.
ಯಾವ ಮಾಡೆಲ್‌ಗೂ ಕಮ್ಮಿಯಿಲ್ಲ ಎಬಿಡಿ ಪತ್ನಿ ಡೇನಿಯಲ್ಲೆ..! ತಾಜ್ ಮಹಲ್ ಎದುರು ಪ್ರೇಮ ನಿವೇದನೆ ಮಾಡಿದ್ದ ಡಿವಿಲಿಯರ್ಸ್
ಕಳೆದ 5 ದಿನಗಳಲ್ಲಿ ಆಸ್ಪ್ರೇಲಿಯಾ, ಜರ್ಮನಿ ವಿರುದ್ಧ ತಲಾ 2 ಜಯ ಸಾಧಿಸಿದ ಭಾರತ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 8 ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆದ್ದಿರುವ ಭಾರತ 19 ಅಂಕ ಹೊಂದಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಮೇ 26ರಂದು ಬೆಲ್ಜಿಯಂ ವಿರುದ್ಧ ಆಡಲಿದೆ.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಮೊದಲ ಸುತ್ತಲ್ಲೇ ಸೋತ ಸಿಂಧು!
ಬರ್ಮಿಂಗ್‌ಹ್ಯಾಮ್: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವ ನಂ.17, ಚೀನಾದ ಝಾಂಗ್ ಯಿ ಮಾನ್ ವಿರುದ್ಧ 17-21, 11-21 ನೇರ ಗೇಮ್‌ಗಳಲ್ಲಿ ಸೋಲುಂಡರು.
ಕೇವಲ 39 ನಿಮಿಷಗಳ ಕಾಲ ನಡೆದ ಪಂದ್ಯದ ಯಾವ ಹಂತದಲ್ಲೂ ಸಿಂಧು ಪುಟಿದೇಳುವ ಛಾತಿ ತೋರಲಿಲ್ಲ. 2023ರಲ್ಲಿ ಸಿಂಧು 3ನೇ ಬಾರಿ ಪ್ರತಿಷ್ಠಿತ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡಿದ್ದು, ಲಯಕ್ಕೆ ಮರಳಲು ನಿರೀಕ್ಷೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ.
ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ವಿಶ್ವ ನಂ.7 ಥಾಯ್ಲೆಂಡ್‌ನ ಜೊಂಗ್‌ಕೊಲ್ಫಾನ್ ಹಾಗೂ ರವಿಂಡಾ ಪ್ರಜೊಂಗ್ಝಾಯಿ ವಿರುದ್ಧ ಭಾರತದ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ 21-18, 21-14 ಗೇಮ್‌ಗಳಲ್ಲಿ ಜಯಿಸಿ 2ನೇ ಸುತ್ತಿಗೇರಿದರು.