ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್
ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್| ಮಹಿಳಾ ಐಪಿಎಲ್ ಫೈನಲ್: ವೆಲಾಸಿಟಿ ವಿರುದ್ಧ 4 ವಿಕೆಟ್ ಜಯ | ವೆಲಾಸಿಟಿ 121/6, ಸೂಪರ್‌ನೋವಾಸ್ 125/6
ಜೈಪುರ[ಮೇ.12]: ಚೊಚ್ಚಲ ಮಹಿಳಾ ಟಿ20 ಚಾಲೆಂಜರ್ (ಮಹಿಳಾ ಐಪಿಎಲ್) ಟೂರ್ನಿಯಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಸೂಪರ್‌ನೋವಾಸ್ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್ ಆಕರ್ಷಕ ಅರ್ಧಶತಕ ಹಾಗೂ ಕೊನೆಯಲ್ಲಿ ರಾಧಾ ಯಾದವ್‌ರ ಜವಾಬ್ದಾರಿ ಯುತ ಆಟ ಸೂಪರ್‌ನೋವಾಸ್ ಗೆಲುವಿಗೆ ಕಾರಣವಾಯಿತು
ಮೊದಲು ಬ್ಯಾಟ್ ಮಾಡಿದ ವೆಲಾಸಿಟಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
ಸುಲಭ ಗುರಿ ಬೆನ್ನತ್ತಿದ ಸೂಪರ್‌ನೋವಾಸ್, ಆರಂಭಿಕ ಆಘಾತದ ಬಳಿಕ ಚೇತರಿಕೆ ಕಂಡಿತು. ಪ್ರಿಯಾ ಪೂನಿಯಾ (29) ಹಾಗೂ ಜೆಮಿಮಾ ರೋಡ್ರಿಗಸ್ (22) ತಂಡ ೫೦ ರನ್ ದಾಟುವಂತೆ ನೋಡಿಕೊಂಡರು. ಆದರೆ ಸತತ 2 ಎಸೆತಗಳಲ್ಲಿ ಇವರಿಬ್ಬರು ಔಟಾದ ಕಾರಣ, ಹರ್ಮನ್‌ಪ್ರೀತ್ ಮೇಲೆ ಒತ್ತಡ ಹೆಚ್ಚಿತು. ಕೇವಲ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 51 ರನ್ ಸಿಡಿಸಿದ ಹರ್ಮನ್‌ಪ್ರೀತ್ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು.
ಕೊನೆ ಓವರಲ್ಲಿ ಗೆಲುವಿಗೆ 7 ರನ್ ಬೇಕಿತ್ತು. ರಾಧಾ ಯಾದವ್ 4 ಎಸೆತಗಳಲ್ಲಿ 10 ರನ್ ಗಳಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹರ್ಮನ್ ಪ್ರೀತ್‌ರ ನಿರ್ಧಾರ ಸರಿಯಿತ್ತು. ಇನ್ನಿಂಗ್ಸ್‌ನ 2ನೇ ಎಸೆತದಲ್ಲೇ ಹೇಯ್ಲಿ ಮ್ಯಾಥ್ಯೂಸ್ (೦೦) ವಿಕೆಟ್ ಕಳೆದುಕೊಂಡರು. ಸ್ಫೋಟಕ ಆಟಗಾರ್ತಿ ಡೇನಿಯಲ್ ವ್ಯಾಟ್ (೦) ಅನುಜಾ ಪಾಟೀಲ್ ಎಸೆದ 2ನೇ ಓವರ್‌ನಲ್ಲಿ ಸ್ಟಂಪ್ ಔಟ್ ಆದರು. 1 ರನ್ ಗೆ ವೆಲಾಸಿಟಿ 2 ವಿಕೆಟ್ ಕಳೆದುಕೊಂಡಿತು. 8ನೇ ಓವರ್‌ನಲ್ಲಿ 37 ರನ್‌ಗೆ 5 ವಿಕೆಟ್ ಕಳೆದುಕೊಂಡ ವೆಲಾಸಿಟಿ ಭಾರಿ ಸಂಕಷ್ಟಕ್ಕೆ ಸಿಲುಕಿತು.
ಕೆರ್ರ‌್, ಸುಷ್ಮಾ ಆಸರೆ:
ನ್ಯೂಜಿಲೆಂಡ್‌ನ ೧೮ ವರ್ಷದ ಅಮೆಲಿ ಕೆರ್ರ್ ಹಾಗೂ ವಿಕೆಟ್ ಕೀಪರ್ ಸುಷ್ಮಾ ವರ್ಮಾ 6ನೇ ವಿಕೆಟ್‌ಗೆ ಕ್ರೀಸ್ ಹಂಚಿ ಕೊಂಡು ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್ ಜೊತೆಯಾಟವಾಡಿದರು. 38 ಎಸೆತಗಳಲ್ಲಿ ೪ ಬೌಂಡರಿಯೊಂದಿಗೆ ಕೆರ್ರ‌್ 36 ರನ್ ಗಳಿಸಿದರೆ, ಸುಷ್ಮಾ 32 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ 40 ರನ್ ಗಳಿಸಿ ಅಜೇಯರಾಗಿ ಉಳಿದರು.