Asianet Suvarna News Asianet Suvarna News

Wimbledon 2023: ಜೋಕೋವಿಚ್‌ಗೆ 46ನೇ ಗ್ರ್ಯಾನ್‌ ಸ್ಲಾಂ ಸೆಮೀಸ್‌ ಪ್ರವೇಶ..!

ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ನೋವಾಕ್ ಜೋಕೋವಿಚ್ ಸೆಮೀಸ್‌ಗೆ ಲಗ್ಗೆ
ದಾಖಲೆಯ 46ನೇ ಬಾರಿಗೆ ಸೆಮೀಸ್‌ ಪ್ರವೇಶಿಸಿದ ಸರ್ಬಿಯಾದ ಆಟಗಾರ
24ನೇ ಟೆನಿಸ್ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ 2ನೇ ಶ್ರೇಯಾಂಕಿತ ಜೋಕೋವಿಚ್

Wimbledon 2023 Novak Djokovic 46th major semi final equal Roger Federer record kvn
Author
First Published Jul 13, 2023, 9:32 AM IST

ಲಂಡನ್‌(ಜು.13): ದಾಖಲೆಯ 23 ಗ್ರ್ಯಾನ್‌ಸ್ಲಾಂಗಳ ಒಡೆಯ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ 12ನೇ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಜೊತೆಗೆ 46ನೇ ಗ್ರ್ಯಾನ್‌ಸ್ಲಾಂ ಸೆಮೀಸ್‌ಗೇರಿದ ಸಾಧನೆ ಮಾಡಿದ 2ನೇ ಶ್ರೇಯಾಂಕಿತ ಜೋಕೋ, 20 ಗ್ರ್ಯಾನ್‌ಸ್ಲಾಂ ವಿಜೇತ ಸ್ವಿಜರ್‌ಲೆಂಡ್‌ನ ರೋಜರ್‌ ಫೆಡಡರ್‌ ದಾಖಲೆಯನ್ನು ಸರಿಗಟ್ಟಿದರು. ಫೆಡರರ್‌ ಕೂಡಾ 46 ಬಾರಿ ಸೆಮಿಫೈನಲ್‌ ಆಡಿದ್ದರು.

ಮಂಗಳವಾರ ರಾತ್ರಿ 2 ಗಂಟೆ 48 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಜೋಕೋ, 7ನೇ ಶ್ರೇಯಾಂಕಿತ ರಷ್ಯಾದ ಆ್ಯಂಡ್ರೆ ರುಬ್ಲೆವ್‌ ವಿರುದ್ಧ 4-6, 6-1, 6-4, 6-3 ಅಂತರದಲ್ಲಿ ಗೆಲುವು ಸಾಧಿಸಿದರು. ಗ್ರ್ಯಾನ್‌ಸ್ಲಾಂನಲ್ಲಿ ಮೊದಲ ಬಾರಿ ಸೆಮೀಸ್‌ಗೇರುವ ನಿರೀಕ್ಷೆಯಲ್ಲಿದ್ದ ರುಬ್ಲೆವ್‌, ಜೋಕೋಗೆ ಮೊದಲ ಸೆಟ್‌ನಲ್ಲಿ ಆಘಾತ ನೀಡಿದರು. ಆದರೆ ಸತತ 5ನೇ, ಒಟ್ಟಾರೆ 8ನೇ ವಿಂಬಲ್ಡನ್‌ ಗೆಲ್ಲುವ ಹಾದಿಯಲ್ಲಿರುವ ಜೋಕೋ ವಿರುದ್ಧ ಬಳಿಕ ಮೇಲುಗೈ ಸಾಧಿಸಲು ರುಬ್ಲೆವ್‌ಗೆ ಸಾಧ್ಯವಾಗದೆ ಪಂದ್ಯವನ್ನು ಕಳೆದುಕೊಂಡರು. ಸೆಮೀಸ್‌ನಲ್ಲಿ ಜೋಕೋಗೆ ಇಟಲಿಯ ಜಾನಿಕ್‌ ಸಿನ್ನರ್‌ ಸವಾಲು ಎದುರಾಗಲಿದೆ. 8ನೇ ಶ್ರೇಯಾಂಕಿತ ಸಿನ್ನರ್‌ ಕ್ವಾರ್ಟರ್‌ನಲ್ಲಿ ರಷ್ಯಾದ ರೋಮನ್‌ ಸಫಿಯುಲಿನ್‌ ವಿರುದ್ಧ ಗೆದ್ದರು.

Wimbledon 2023: ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!

ರಬೈಕೆನಾಗೆ ಶಾಕ್‌!

ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌, ಕಜಕಸ್ತಾನದ ಎಲೆನಾ ರಬೈಕೆನಾ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಹೊರಬಿದ್ದರು. ಕಳೆದ ವರ್ಷ ಫೈನಲ್‌ನಲ್ಲಿ ತಮ್ಮ ವಿರುದ್ಧ ಸೋತಿದ್ದ ಟ್ಯುನೀಶಿಯಾದ ಒನ್ಸ್‌ ಜಬುರ್‌ ವಿರುದ್ಧ ಬುಧವಾರ ರಬೈಕೆನಾ 7-6(7/5), 4-6, 1-6 ಸೆಟ್‌ಗಳಿಂದ ಪರಾಭವಗೊಂಡರು.

ರಿಟೈರ್ಡ್‌​ ಆಗಿ 3 ವರ್ಷವಾದ್ರೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್​ ವ್ಯಾಲ್ಯೂ..! ಮಹಿ ಸಾವಿರ ಕೋಟಿ ಒಡೆಯ.!

ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿರುವ ಬೆಲಾರಸ್‌ನ ಅರೈನಾ ಸಬಲೆಂಕಾ, ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧ 6-2, 6-4 ಅಂತರದಲ್ಲಿ ಗೆದ್ದು ಸೆಮೀಸ್‌ಗೇರಿದರು. ಸೆಮೀಸ್‌ನಲ್ಲಿ ಸಬಲೆಂಕಾಗೆ ಜಬುರ್‌ ಸವಾಲು ಎದುರಾಗಲಿದೆ.

ಸೆಮಿಗೆ ಬೋಪಣ್ಣ!

ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಸೆಮಿಫೈನಲ್‌ ಪ್ರವೇಶಿಸಿದರು. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿರುವ ಬೋಪಣ್ಣ, ಬುಧವಾರ ಕ್ವಾರ್ಟರ್ ಫೈನಲ್‌ನಲ್ಲಿ ನೆದರ್‌ಲೆಂಡ್ಸ್‌ನ ಗ್ರೀಕ್‌ಸ್ಪೂರ್‌-ಬಾರ್ಟ್‌ ಸ್ಟೀವನ್ಸ್‌ ಜೋಡಿ ವಿರುದ್ಧ 6-7(3/7), 7-5. 6-2 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಇದರೊಂದಿಗೆ ಬೋಪಣ್ಣ 3ನೇ ಬಾರಿ ವಿಂಬಲ್ಡನ್‌ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಈ ಮೊದಲು 2013, 2015ರಲ್ಲೂ ಅಂತಿಮ 4ರ ಘಟ್ಟ ತಲುಪಿದ್ದರು.

ಏಕದಿನ ಕ್ರಿಕೆಟ್‌ ಬಹುತೇಕ ಸ್ಥಗಿತಕ್ಕೆ ತಜ್ಞರ ಸಲಹೆ..! ಯಾಕೆ ಹೀಗೆ?

ಇಂದಿನಿಂದ ಪುಣೆಯಲ್ಲಿ 4ನೇ ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ 

ಪುಣೆ: 4ನೇ ಆವೃತ್ತಿಯ ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ ಟೂರ್ನಿ ಪುಣೆಯಲ್ಲಿ ಗುರುವಾರ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಲಯನ್ಸ್‌ ಹಾಗೂ ಪುಣೇರಿ ಪಲ್ಟನ್‌ ತಂಡಗಳು ಸೆಣಸಾಡಲಿವೆ. ಟೂರ್ನಿ ಜು.31ರ ವರೆಗೆ ನಡೆಯಲಿದ್ದು, ಪ್ರತಿ ದಿನ 1 ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಮನಿಕಾ ಬಾತ್ರಾ ನಾಯಕತ್ವದ ಬೆಂಗಳೂರು ಸ್ಮಾಶರ್ಸ್‌, ದಬಾಂಗ್‌ ಡೆಲ್ಲಿ, ಗೋವಾ ಚಾಲೆಂಜರ್ಸ್‌ ಹಾಗೂ ಯು ಮುಂಬಾ ತಂಡಗಳೂ ಪಾಲ್ಗೊಳ್ಳಲಿವೆ. 2019ರಲ್ಲಿ ನಡೆದಿದ್ದ 3ನೇ ಆವೃತ್ತಿಯಲ್ಲಿ ಚೆನ್ನೈ ಲಯನ್ಸ್‌ ತಂಡ ಚಾಂಪಿಯನ್‌ ಆಗಿತ್ತು.
 

Follow Us:
Download App:
  • android
  • ios