ವಿಂಬಲ್ಡನ್‌ಗೆ ಹೊಸ ದೊರೆ..! ವೆಲ್‌ಡನ್ ಕಾರ್ಲೊಸ್ ಆಲ್ಕರಜ್!
ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಗೆದ್ದ 20 ವರ್ಷದ ಕಾರ್ಲೊಸ್ ಆಲ್ಕರಜ್
23 ಗ್ರ್ಯಾನ್ ಸ್ಲಾಂ ಒಡೆಯ ಜೋಕೋವಿಚ್‌ಗೆ ಸೋಲಿನ ಶಾಕ್
ಕಾರ್ಲೋಸ್ ಯುಗ ಆರಂಭ?
ಲಂಡನ್(ಜು.17): ಟೆನಿಸ್‌ನ ಭವಿಷ್ಯದ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುತ್ತಿರುವ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ 2023ರ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಭಾರೀ ರೋಚಕ ಫೈನಲ್‌ನಲ್ಲಿ 23 ಗ್ರ್ಯಾನ್ ಸ್ಲಾಂಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ ವಿರುದ್ಧ 20 ವರ್ಷದ ಆಲ್ಕರಜ್ 1-6, 7-6(8/6), 6-1, 6-4 ಸೆಟ್‌ಗಳಲ್ಲಿ ಜಯ ಸಾಧಿಸಿ ಸಂಭ್ರಮಿಸಿದರು.
ಕೇವಲ 34 ನಿಮಿಷದಲ್ಲಿ 6-1 ಗೇಮ್‌ಗಳಲ್ಲಿ ಮೊದಲ ಸೆಟ್ ಗೆದ್ದ ಜೋಕೋವಿಚ್ ಸುಲಭ ಜಯದೊಂದಿಗೆ 24ನೇ ಗ್ರ್ಯಾನ್ ಸ್ಲಾಂಗೆ ಮುತ್ತಿಡುವ ನಿರೀಕ್ಷೆಯಲ್ಲಿದ್ದರು. ಆದರೆ ಆಲ್ಕರಜ್‌ರ ಆಟ 2ನೇ ಸೆಟ್‌ನಲ್ಲಿ ತೀವ್ರಗೊಂಡಿತು. ಒಂದೊಂದು ಅಂಕಕ್ಕೂ ಇಬ್ಬರು ಪೈಪೋಟಿ ನಡೆಸಿ ಸೆಟ್ ಅನ್ನು ಟೈ ಬ್ರೇಕರ್‌ಗೆ ಕೊಂಡೊಯ್ದರು.
ಟೈ ಬ್ರೇಕರ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದರೂ, ಜೋಕೋವಿಚ್ ಸೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬರೋಬ್ಬರಿ 85 ನಿಮಿಷಗಳ ಕಾಲ ನಡೆದ ಸೆಟ್ ತಮ್ಮದಾಗಿಸಿಕೊಂಡ ಆಲ್ಕರಜ್ ಸಮಬಲ ಸಾಧಿಸಿದರು. 3ನೇ ಸೆಟ್‌ನಲ್ಲಿ ಕಾರ್ಲೋಸ್ ಸಂಪೂರ್ಣ ಪ್ರಾಬಲ್ಯ ಮೆರೆದರು. 4ನೇ ಸೆಟ್ ಇನ್ನಷ್ಟು ಪೈಪೋಟಿಯಿಂದ ಕೂಡಿತ್ತು.
ಒಂದು ಗೇಮ್‌ಗಾಗಿ 26 ನಿಮಿಷ ಸೆಣಸಾಟ!
3ನೇ ಸೆಟ್‌ನ 5ನೇ ಗೇಮ್ ಬರೋಬ್ಬರಿ 26 ನಿಮಿಷ ನಡೆಯಿತು. 13 ಬಾರಿ ಉಭಯ ಆಟಗಾರರು 40-40(ಡ್ಯೂಸ್)ರಲ್ಲಿ ಸಮಬಲ ಸಾಧಿಸಿ ಗೇಮ್ ತಮ್ಮದಾಗಿಸಿಕೊಳ್ಳಲು ಸೆಣಸಿದರು. 8ನೇ ಯತ್ನದಲ್ಲಿ ಜೋಕೋವಿಚ್‌ರ ಸರ್ವ್ ಮುರಿದ ಆಲ್ಕರಜ್ ಗೇಮ್ ತಮ್ಮದಾಗಿಸಿಕೊಂಡು ಮುನ್ನಡೆ ಸಾಧಿಸಿದರು.
ಕಾರ್ಲೋಸ್ ಯುಗ ಆರಂಭ?
ಪುರುಷರ ಟೆನಿಸ್‌ನಲ್ಲೀಗ ಕಾರ್ಲೋಸ್ ಆಲ್ಕರಜ್‌ರ ಯುಗ ಆರಂಭಗೊಂಡಂತೆ ಕಾಣುತ್ತಿದೆ. ಕಳೆದೆರಡು ದಶಕ ಟೆನಿಸ್ ಲೋಕವನ್ನು ಆಳಿದ ರೋಜರ್ ಫೆಡರರ್ ಈಗಾಗಲೇ ನಿವೃತ್ತಿ ಪಡೆದಿದ್ದಾರೆ. ರಾಫೆಲ್ ನಡಾಲ್ ನಿವೃತ್ತಿಯ ಹೊಸ್ತಿಲಲ್ಲಿದ್ದಾರೆ. ನೋವಾಕ್ ಜೋಕೋವಿಚ್ ಹೆಚ್ಚೆಂದರೆ 2-3 ವರ್ಷ ಆಡಬಹುದು. 20ನೇ ವಯಸ್ಸಿಗೇ ಎರಡು ಗ್ರ್ಯಾನ್ ಸ್ಲಾಂ ಗೆದ್ದಿರುವ ಆಲ್ಕರಜ್ ಮುಂದಿನ ಹಲವು ವರ್ಷಗಳ ಕಾಲ ಟೆನಿಸ್ ಜಗತ್ತನ್ನು ಆಳುವ ಭರವಸೆ ಮೂಡಿಸಿದ್ದಾರೆ.
ವಿಂಬಲ್ಡನ್ ಗೆದ್ದ 3ನೇ ಅತಿ ಕಿರಿಯ
ಓಪನ್ ಟೆನಿಸ್ ಯುಗದಲ್ಲಿ ವಿಂಬಲ್ಡನ್ ಗೆದ್ದ 3ನೇ ಅತಿ ಕಿರಿಯ ಟೆನಿಸಿಗ ಎಂಬ ಖ್ಯಾತಿಗೆ ಆಲ್ಕರಜ್(20 ವರ್ಷ 72 ದಿನ) ಪಾತ್ರರಾದರು. ಇದಕ್ಕೂ ಮೊದಲು ಜರ್ಮನಿಯ ಬೋರಿಸ್ ಬೆಕರ್ 1985 ಮತ್ತು 1986ರಲ್ಲಿ ಕ್ರಮವಾಗಿ ತಮ್ಮ 17 ಮತ್ತು 18ನೇ ವಯಸ್ಸಲ್ಲಿ ವಿಂಬಲ್ಡನ್ ಗೆದ್ದಿದ್ದರು. ಬಳಿಕ ಸ್ವೀಡನ್‌ನ ಬೊರ್ನ್ ಬೊರ್ಗ್ ತಮಗೆ 20 ವರ್ಷ 27 ದಿನವಾಗಿದ್ದಾಗ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು.
25.25 ಕೋಟಿ ರು; ವಿಂಬಲ್ಡನ್ ಗೆದ್ದ ಆಲ್ಕರಜ್‌ಗೆ 2.35 ಮಿಲಿಯನ್ ಪೌಂಡ್ಸ್(ಸುಮಾರು 25.25 ಕೋಟಿ ರು. ನಗದು ಬಹುಮಾನ ಲಭಿಸಿತು.
12.62 ಕೋಟಿ ರು; ರನ್ನರ್-ಅಪ್ ಜೋಕೋವಿಚ್ 1.17 ಮಿಲಿಯನ್ ಪೌಂಡ್ಸ್(ಸುಮಾರು 12.62 ಕೋಟಿ ರು.) ನಗದು ಬಹುಮಾನ ಲಭಿಸಿತು.
20 ವರ್ಷದಲ್ಲಿ ಕೇವಲ 5ನೇ ಚಾಂಪಿಯನ್!
ಆಲ್ಕರಜ್ ವಿಂಬಲ್ಡನ್‌ನಲ್ಲಿ ಕಳೆದ 20 ವರ್ಷಗಳಲ್ಲಿ ಚಾಂಪಿಯನ್ ಆದ ಕೇವಲ 5ನೇ ಟೆನಿಸಿಗ. 2003ರ ಬಳಿಕ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ನೋವಾಕ್ ಜೋಕೋವಿಚ್, ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಬ್ರಿಟನ್‌ನ ಆ್ಯಂಡಿ ಮರ್ರೆ ಈ ನಾಲ್ವರೇ ಪ್ರಶಸ್ತಿ ಗೆದ್ದಿದ್ದಾರೆ. ಈ ಪೈಕಿ ಫೆಡಡರ್ 8 ಬಾರಿ ಚಾಂಪಿಯನ್ ಆಗಿದ್ದರೆ, ಜೋಕೋವಿಚ್ 7 ಪ್ರಶಸ್ತಿ ಪಡೆದಿದ್ದಾರೆ. ನಡಾಲ್ ಹಾಗೂ ಮರ್ರೆ ತಲಾ 2 ಬಾರಿ ಚಾಂಪಿಯನ್ ಆಗಿದ್ದಾರೆ.
2ನೇ ಬಾರಿ ಜೋಕೋಗೆ ಫೈನಲ್‌ನಲ್ಲಿ ಸೋಲು!
ಜೋಕೋವಿಚ್ ಈ ಸಲ ಸೇರಿ ಒಟ್ಟು 9 ಬಾರಿ ವಿಂಬಲ್ಡನ್ ಫೈನಲ್ ಆಡಿದ್ದು, 2 ಬಾರಿ ಸೋತಿದ್ದಾರೆ. ಇದಕ್ಕೂ ಮೊದಲು ಅವರು ವಿಂಬಲ್ಡನ್ ಫೈನಲ್‌ನಲ್ಲಿ ಸೋತಿದ್ದು 2013ರಲ್ಲಿ ಆ್ಯಂಡಿ ಮರ್ರೆ ವಿರುದ್ಧ. ಒಟ್ಟಾರೆ ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲಿ ಜೋಕೋವಿಚ್‌ಗೆ ಇದು 12ನೇ ಸೋಲು.