ಲಂಡನ್‌[ಜು.09]: ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಯಿಂದ ಹಾಲಿ ವಿಶ್ವ ನಂ.1 ಆಟಗಾರ್ತಿ ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ ಹೊರಬಿದ್ದಿದ್ದಾರೆ. ಸೋಮವಾರ ನಡೆದ ಮಹಿಳಾ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಬಾರ್ಟಿ, ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ ಅಲಿಸನ್‌ ರಿಸ್ಕೆ ವಿರುದ್ಧ 6-3, 2-6, 3-6 ಸೆಟ್‌ಗಳಲ್ಲಿ ಸೋಲುಂಡರು. ಈ ವರ್ಷ ಹುಲ್ಲಿನಂಕಣದಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದಿರುವ 29 ವರ್ಷದ ರಿಸ್ಕೆ ಇದೇ ಮೊದಲ ಬಾರಿಗೆ, ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ವಿಂಬಲ್ಡನ್ 2019 ಪ್ರಿ ಕ್ವಾರ್ಟರ್‌ಫೈನಲ್‌ಗೆ ಸೆರೆನಾ

ಸ್ಪೇನ್‌ನ ಸುವಾರೆಜ್‌ ವಿರುದ್ಧ 6-2, 6-2ರಲ್ಲಿ ಗೆದ್ದ ಸೆರೆನಾ ವಿಲಿಯಮ್ಸ್‌, ಕ್ವಾರ್ಟರ್‌ ಫೈನಲ್‌ನಲ್ಲಿ ರಿಸ್ಕೆ ವಿರುದ್ಧ ಆಡಲಿದ್ದಾರೆ. 3ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ತಮ್ಮ ದೇಶದವರೇ ಆದ ಕ್ಯಾರೋಲಿನಾ ಮುಚೋವಾ ವಿರುದ್ಧ ಸೋಲುಂಡು ಹೊರಬಿದ್ದರೆ, ಅಮೆರಿಕದ 15 ವರ್ಷದ ಶಾಲಾ ಬಾಲಕಿ ಕೋರಿ ಗಾಫ್‌ರ ಓಟಕ್ಕೆ ಮಾಜಿ ನಂ.1 ರೋಮೇನಿಯಾದ ಸಿಮೋನಾ ಹಾಲೆಪ್‌ ತಡೆಯೊಡ್ಡಿದರು.

ನಡಾಲ್‌ ಕ್ವಾರ್ಟರ್‌ಗೆ: ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ಗೆ 18 ಗ್ರ್ಯಾಂಡ್‌ಸ್ಲಾಂಗಳ ಒಡೆಯ ರಾಫೆಲ್‌ ನಡಾಲ್‌ ಪ್ರವೇಶಿಸಿದ್ದಾರೆ. ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ನಡಾಲ್‌, ಜೊವಾ ಸೌಸಾ ವಿರುದ್ಧ 6-2, 6-2, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ಗೆ ಅಮೆರಿಕದ ಸ್ಯಾಮ್‌ ಕ್ವೆರ್ರಿ ಎದುರಾಗಲಿದ್ದಾರೆ. 21ನೇ ಶ್ರೇಯಾಂಕಿತ ಬೆಲ್ಜಿಯಂನ ಡೇವಿಡ್‌ ಗಾಫಿನ್‌, 23ನೇ ಶ್ರೇಯಾಂಕಿತ ಸ್ಪೇನ್‌ನ ಬಟ್ಟಿಸ್ಟಾಅಗುಟ್‌ ಸಹ ಕ್ವಾರ್ಟರ್‌ ಪ್ರವೇಶಿಸಿದ್ದಾರೆ.