ವಿಂಬಲ್ಡನ್ 2019: 2ನೇ ಸುತ್ತಲ್ಲಿ ವಾವ್ರಿಂಕಾ ಔಟ್!
ವಿಂಬಲ್ಡನ್ ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಅಮೆರಿಕಾದ 6 ಅಡಿ 11 ಇಂಚು ಎತ್ತರದ ರೀಲಿ ಒಪೆಲ್ಕಾ, 3 ಬಾರಿ ಗ್ರ್ಯಾಂಡ್‌ಸ್ಲಾಂ ವಿಜೇತ ಸ್ವಿಟ್ಜರ್‌ಲ್ಯಾಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾಗೆ ಶಾಕ್ ನೀಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ಲಂಡನ್[ಜು.04]: 3 ಬಾರಿ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ವಿಜೇತ ಸ್ವಿಜರ್‌ಲೆಂಡ್‌ನ ಸ್ಟ್ಯಾನಿಸ್ಲಾಸ್ ವಾವ್ರಿಂಕಾ ಬುಧವಾರ ವಿಂಬಲ್ಡನ್ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಸೋಲುಂಡು ಹೊರಬಿದ್ದರು. ಅಮೆರಿಕದ 6 ಅಡಿ 11 ಇಂಚು ಎತ್ತರದ ರೀಲಿ ಒಪೆಲ್ಕಾ ವಿರುದ್ಧ ವಾವ್ರಿಂಕಾ 5-7, 6-3, 6-4, 4-6, 6-8 ಸೆಟ್‌ಗಳಲ್ಲಿ ಸೋಲುಂಡರು.
ಅತಿ ಎತ್ತರದ ಟೆನಿಸಿಗ ಎನಿಸಿಕೊಂಡಿರುವ ರೀಲಿ, ಪಂದ್ಯದಲ್ಲಿ ಬರೋಬ್ಬರಿ 23 ಏಸ್‌ಗಳನ್ನು ಸಿಡಿಸಿ ಗಮನ ಸೆಳೆದರು. 21 ವರ್ಷದ ಒಪೆಲ್ಕಾ, ವಿಂಬಲ್ಡನ್‌ನಲ್ಲಿ ಆಡುವ ಮೊದಲ ಹುಲ್ಲಿನಂಕಣದಲ್ಲಿ ಗೆಲುವನ್ನೇ ಕಂಡಿರಲಿಲ್ಲ. 3ನೇ ಸುತ್ತಿನಲ್ಲಿ ಕೆನಡಾದ ಮಿಲೋಸ್ ರವೊನಿಚ್ ವಿರುದ್ಧ ಸೆಣಸಲಿದ್ದಾರೆ.
ವಿಂಬಲ್ಡನ್ 2019: 2ನೇ ಸುತ್ತಿಗೆ ಜೋಕೋವಿಚ್
ಇದೇ ವೇಳೆ 10ನೇ ಶ್ರೇಯಾಂಕಿತ ರಷ್ಯಾದ ಕರೆನ್ ಕಚನೊವ್, 11ನೇ ಶ್ರೇಯಾಂಕಿತೆ ರಷ್ಯಾದ ಡಾನಿ ಮೆಡ್ವಿಡೆವ್, 21ನೇ ಶ್ರೇಯಾಂಕಿತ ಬೆಲ್ಜಿಯಂನ ಡೇವಿಡ್ ಗಾಫಿನ್ 3ನೇ ಸುತ್ತಿಗೆ ಪ್ರವೇಶ ಪಡೆದರು.
ಹಾಲೆಪ್ ಜಯದ ಓಟ: ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್ ತಮ್ಮ ದೇಶದವರೇ ಆದ ಮಿಹಯೆಲಾ ವಿರುದ್ಧ 6-3, 4-6, 6-2 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೆ ಪ್ರವೇಶಿಸಿದರು. 3ನೇ ಶ್ರೇಯಾಂಕಿತೆ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ಪೋರ್ಟೊ ರಿಕೊದ ಮೋನಿಕಾ ಪುಯಿಗ್ ವಿರುದ್ಧ 6-0, 6-4ರಲ್ಲಿ ಸುಲಭ ಗೆಲುವು ಸಾಧಿಸಿ ಮುನ್ನಡೆದರು. 8ನೇ ಶ್ರೇಯಾಂಕಿತೆ ಉಕ್ರೇನ್‌ನ ಎಲೆನಾ ಸ್ವಿಟೋಲಿನಾ, ಎದುರಾಳಿ ಆಟಗಾರ್ತಿ ಗಾಯಗೊಂಡು ನಿವೃತ್ತಿ ಪಡೆದ ಕಾರಣ 3ನೇ ಸುತ್ತಿಗೆ ಲಗ್ಗೆಯಿಟ್ಟರು.