ವಿಂಬಲ್ಡನ್‌ 2019: 2ನೇ ಸುತ್ತಿಗೆ ಜೋಕೋವಿಚ್‌

ವಿಂಬಲ್ಡನ್ ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ಭರ್ಜರಿ ಶುಭಾರಂಭ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Wimbledon 2019 Novak Djokovic starts title defence by beating Philipp Kohlschreiber

ಲಂಡನ್‌[ಜು.02]: ಹಾಲಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ 2019ರ ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಜೋಕೋವಿಚ್‌, ಜರ್ಮನಿಯ 35 ವರ್ಷದ ಫಿಲಿಪ್‌ ಕೋಹ್ಸ್ ಚ್ರೈಬರ್‌ ವಿರುದ್ಧ 6-3, 7-5, 6-3 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. 

2001ರ ಚಾಂಪಿಯನ್‌ ಗೋರನ್‌ ಇವನಿಸೆವಿಚ್‌ರನ್ನು ಕೋಚ್‌ ಆಗಿ ಸ್ವೀಕರಿಸಿರುವ ಜೋಕೋವಿಚ್‌, ಮೊದಲೆರಡು ಸೆಟ್‌ಗಳಲ್ಲಿ ಪ್ರಬಲ ಪೈಪೋಟಿ ಎದುರಿಸಿದರೂ, ಆತಂಕಕ್ಕೊಳಗಾಗದೆ ಗೆಲುವನ್ನು ತಮ್ಮದಾಗಿಸಿಕೊಂಡರು. 16ನೇ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಜೋಕೋವಿಚ್‌, 2ನೇ ಸುತ್ತಿನಲ್ಲಿ ಅಮೆರಿಕದ ಡೆನಿಸ್‌ ಕುಡ್ಲ ವಿರುದ್ಧ ಸೆಣಸಲಿದ್ದಾರೆ.

ವಿಂಬ್ಡಲನ್‌ ಗ್ರ್ಯಾಂಡ್‌ಸ್ಲಾಂ ಆರಂಭ: ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿ ಫೆಡರರ್

ಕಳೆದ ವರ್ಷದ ರನ್ನರ್‌-ಅಪ್‌, 4ನೇ ಶ್ರೇಯಾಂಕಿತ ದ.ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌, ಸ್ವಿಜರ್‌ಲೆಂಡ್‌ನ ಸ್ಟ್ಯಾನಿಸ್ಲಾಸ್‌ ವಾವ್ರಿಂಕಾ ಮೊದಲ ದಿನದ ಆಕರ್ಷಣೆ ಎನಿಸಿದ್ದರು. ಈ ಇಬ್ಬರು ಸುಲಭ ಗೆಲುವುಗಳೊಂದಿಗೆ 2ನೇ ಸುತ್ತಿಗೆ ಪ್ರವೇಶ ಪಡೆದರು.

ರೋಜರ್‌ ಫೆಡರರ್‌ ಹಾಗೂ ರಾಫೆಲ್‌ ನಡಾಲ್‌ ಮಂಗಳವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಫೆಡರರ್‌, ದ.ಆಫ್ರಿಕಾದ ಲಾಯ್ಡ್‌ ಹ್ಯಾರಿಸ್‌ ವಿರುದ್ಧ, ನಡಾಲ್‌ ಜಪಾನ್‌ನ ಯುಶಿಚಿ ಸುಗಿಟಾ ವಿರುದ್ಧ ಸೆಣಸಲಿದ್ದಾರೆ.

ಪ್ಲಿಸ್ಕೋವಾ, ಹಾಲೆಪ್‌ ಶುಭಾರಂಭ

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕಿತೆ ಚೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಹಾಗೂ 7ನೇ ಶ್ರೇಯಾಂಕಿತೆ ರೊಮೇನಿಯಾದ ಸಿಮೋನಾ ಹಾಲೆಪ್‌ ಸುಲಭ ಗೆಲುವು ಸಾಧಿಸಿದರು. ಚೀನಾದ ಲೂ ಝಿನ್‌ ವಿರುದ್ಧ ಪ್ಲಿಸ್ಕೋವಾ 6-2, 7-6 ಸೆಟ್‌ಗಳಲ್ಲಿ ಗೆದ್ದರೆ, ಬೆಲಾರಸ್‌ನ ಅಲಿಯಾಕ್ಸಾಂಡ್ರಾ ಸಸ್ನೋವಿಚ್‌ ವಿರುದ್ಧ 6-4, 7-5 ಸೆಟ್‌ಗಳಲ್ಲಿ ಗೆದ್ದು 2ನೇ ಸುತ್ತಿಗೇರಿದರು.
 

Latest Videos
Follow Us:
Download App:
  • android
  • ios