ಲಂಡನ್[ಜು.08]: 2019ರ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂನಲ್ಲಿ ದಾಖಲೆ ಗ್ರ್ಯಾಂಡ್ ಸ್ಲಾಂ ವಿಜೇತ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ವಿಶ್ವ ನಂ.2ನೇ ಆಟಗಾರ ಫೆಡರರ್, ಫ್ರಾನ್ಸ್‌ನ ಲುಕಾಸ್ ಪೌಲ್ಲೆ ವಿರುದ್ಧ 7-5, 6-2, 7-6(7-4) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಫೆಡರರ್‌ಗೆ ಇದು 350ನೇ ಜಯವಾಗಿದೆ. ಪ್ರಿ ಕ್ವಾರ್ಟರ್ ನಲ್ಲಿ ಫೆಡರರ್, ಇಟಲಿಯ ಮಟೆಯೊ ಬೆರ‌್ರೆಟಿನಿ ರನ್ನು ಎದುರಿಸಲಿದ್ದಾರೆ.

ವಿಂಬಲ್ಡನ್ 2019 ಪ್ರಿ ಕ್ವಾರ್ಟರ್‌ಫೈನಲ್‌ಗೆ ಸೆರೆನಾ

ಸೋಮವಾರ ನಡೆಯಲಿರುವ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ 15ರ ಅಮೆರಿಕದ ಶಾಲಾ ಬಾಲಕಿ ಕೋರಿಗಾಫ್, ಮಾಜಿ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹ್ಯಾಲೆಪ್ ರನ್ನು ಎದುರಿಸಲಿದ್ದಾರೆ. 

ದಿವಿಜ್, ಬೋಪಣ್ಣ ಔಟ್: ವಿಂಬಲ್ಡನ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ದಿವಿಜ್ ಶರಣ್ ಹಾಗೂ ರೋಹನ್ ಬೋಪಣ್ಣ ತಮ್ಮ ಪ್ರತ್ಯೇಕ ಜೋಡಿಗಳೊಂದಿಗೆ 2ನೇ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ. ಇದರೊಂದಿಗೆ ಮಿಶ್ರ ಡಬಲ್ಸ್’ನಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

ರೋಹನ್ ಬೋಪಣ್ಣ, ಬೆಲಾರಸ್‌ನ ಆಯನಾ ಸಬಾಲೆಂಕಾ ಜೋಡಿ, ನ್ಯೂಜಿಲೆಂಡ್‌ನ ಆರ‌್ಟೆಮ್ ಸಿಟಕ್, ಜರ್ಮನಿಯ ಲುರಾ ಜೋಡಿ ವಿರುದ್ಧ 4-6, 4-6 ಸೆಟ್‌ಗಳಲ್ಲಿ ಸೋಲುಂಡಿತು. ದಿವಿಜ್ ಶರಣ್, ಚೀನಾದ ಯಿಂಗ್‌ಯಿಂಗ್ ಜೋಡಿ, ಬ್ರಿಟನ್‌ನ ಎಡೆನ್ ಸಿಲ್ವಾ, ಇವನ್ ಹೊಯತ್ ಜೋಡಿ ವಿರುದ್ಧ3-6, 4-6 ಸೆಟ್‌ಗಳಲ್ಲಿ ಪರಾಭವ ಹೊಂದಿತು.
ಲಿಯಾಂಡರ್ ಪೇಸ್, ಆಸ್ಟ್ರೇಲಿಯಾದ ಸಮಂತಾ ಸ್ಟೌಸರ್ ಜೋಡಿ ಮೊದಲ ಸುತ್ತಲ್ಲಿ ಹೊರಬಿದ್ದಿತ್ತು.