ಮಾಸ್ಕೋ(ಜೂ.16): ಫುಟ್ಬಾಲ್ ಪಟುಗಳು ಟ್ಯಾಟು ಹಾಸಿಕೊಳ್ಳೋದು ಸರ್ವೇ ಸಾಮಾನ್ಯ. ಇದೀಗ ಎಲ್ಲಾ ಕ್ರೀಡಾಪಟುಗಳು ಟ್ಯಾಟು ಟ್ರೆಂಡ್ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ಕೆಎಲ್ ರಾಹುಲ್ ಕೂಡ ಹೊರತಾಗಿಲ್ಲ. ಆದರೆ ಇಡೀ ವಿಶ್ವದ ಜನಪ್ರೀಯ ಫುಟ್ಬಾಲ್ ತಾರೆ ಪೋರ್ಚುಗಲ್‌ನ ರೋನಾಲ್ಡೋ ಇದುವರೆಗೂ  ಟ್ಯಾಟು ಹಾಕಿಸಿಕೊಂಡಿಲ್ಲ. ಅಚ್ಚರಿಯಾದರೂ, ಇದು ಸತ್ಯ.

ಫುಟ್ಬಾಲ್ ಸ್ಟಾರ್‌ಗಳಾದ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ, ಬ್ರೆಜಿಲ್‌ನ ನೇಯ್ಮಾರ್ ಹೀಗೆ ಬಹುತೇಕ ಎಲ್ಲಾ ಫುಟ್ಬಾಲ್ ಪಟುಗಳು ಟ್ಯಾಟು ಹಾಕಿಸಿಕೊಂಡಿದ್ದಾರೆ. ಆದರೆ ರೋನಾಲ್ಡೋ ಇದುವರೆಗೂ ಟ್ಯಾಟು ಹಾಕಿಸಿಕೊಂಡಿಲ್ಲ. ಇದರ ಹಿಂದೆ ಒಂದು ಕಥೆ ಇದೆ.

ಕ್ರಿಸ್ಟಿಯಾನೋ ರೋನಾಲ್ಡೋ ಟ್ಯಾಟು ಹಾಕಿಸಿಕೊಳ್ಳದೇ ಇರಲು ಮುಖ್ಯ  ಕಾರಣ, ಈತ ನಿಯಮಿತ ರಕ್ತದಾನಿ. ತಾವು ಎಲ್ಲೇ ಇದ್ದರೂ, ಯಾವುದೇ ದೇಶದಲ್ಲಿದ್ದರೂ ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಾರೆ. 2009ರಲ್ಲಿ ರೊನಾಲ್ಡೋ ಮೊದಲ ಬಾರಿಗೆ ರಕ್ತದಾನ ಮಾಡಿದ್ದರು. ಆ ಬಳಿಕ ರಕ್ತದಾನದ ಮಹತ್ವ ಅರಿತ ಅವರು 2011ರಿಂದ ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಅವರು ರಕ್ತದಾನದ ಕಾರ್ಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದರೆ ಅವರ ಪೋರ್ಚುಗಲ್ ನಿವಾಸದಲ್ಲಿ ರಕ್ತಾದಾನ ಮಾಡುವುದಕ್ಕಾಗಿಯೇ ವಿಶೇಷ ಕೊಠಡಿ ಮೀಸಲಿಟ್ಟು, ಅದರಲ್ಲಿ ಪುಟ್ಟ ಲ್ಯಾಬ್ ಕೂಡ ತೆರೆದಿದ್ದಾರೆ.

ರಕ್ತದಾನಕ್ಕಾಗಿಯೋ ರೋನಾಲ್ಡೋ ಟ್ಯಾಟು ಹಾಕಿಸಿಕೊಂಡಿಲ್ಲ. ವೈದ್ಯರ ಪ್ರಕಾರ ಟ್ಯಾಟು ಹಾಕಿಸಿಕೊಂಡ ವ್ಯಕ್ತಿ ಕನಿಷ್ಠ 3 ರಿಂದ 6 ತಿಂಗಳ ಕಾಲ ರಕ್ತದಾನ ಮಾಡುವಂತಿಲ್ಲ. ಇದೇ ಕಾರಣಕ್ಕಾಗಿ ರೋನಾಲ್ಡೋ ತಮಗೆ ಇಷ್ಟವಿದ್ದರೂ ಟ್ಯಾಟು ಮಾತ್ರ ಹಾಕಿಸಿಕೊಂಡಿಲ್ಲ.