ಭಾರತೀಯ ಕ್ರಿಕೆಟ್'ನಲ್ಲಿ ಈಗ ಬಹಳಷ್ಟು ಯುವ ಪ್ರತಿಭೆಗಳು ಬೆಳಗುತ್ತಿವೆ. ಈ ಹಿನ್ನೆಲೆಯಲ್ಲಿ ಸುರೇಶ್ ರೈನಾ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಕಷ್ಟಕರವೇ ಆಗಲಿದೆ.
ಬೆಂಗಳೂರು(ಮಾ. 23): ಎರಡು ವರ್ಷಗಳ ಹಿಂದಿನವರೆಗೂ ಭಾರತೀಯ ಕ್ರಿಕೆಟ್'ನಲ್ಲಿ ಸುರೇಶ್ ರೈನಾ ಎಂದರೆ ಮ್ಯಾಚ್ ವಿನ್ನರ್ ಎಂದೇ ಹೆಸರಿತ್ತು. ಟೆಸ್ಟ್ ಕ್ರಿಕೆಟ್ ಆಡದೇ ಇದ್ದರೂ ಏಕದಿನ ಹಾಗೂ ಟಿ20 ಕ್ರಿಕೆಟ್'ನಲ್ಲಿ ರೈನಾ ಅವರದ್ದು ದೊಡ್ಡ ಛಾಪೇ ಮೂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಬಂದು ಸ್ಫೋಟಕ ಬ್ಯಾಟಿಂಗ್ ಆಡಿ ತಮ್ಮ ತಂಡಕ್ಕೆ ಗೆಲುವು ತಂದುಕೊಡುವ ಛಾತಿ ಅವರಲ್ಲಿತ್ತು. ಇಂಥ ಅಸಾಮಾನ್ಯ ಕ್ರಿಕೆಟಿಗ ಇತ್ತೀಚೆಗೆ ಕ್ರಿಕೆಟ್ ಬ್ಯಾಟ್ ಹಿಡಿದಿದ್ದೇ ಅಪರೂಪ. ನಿನ್ನೆ ಬಿಸಿಸಿಐ ಪ್ರಕಟಿಸಿದ ಸಿ ಗುಂಪಿನ 32 ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ರೈನಾ ಹೆಸರೇ ಇರಲಿಲ್ಲ. ಐಪಿಎಲ್'ನಲ್ಲಿ ರೈನಾ ಆಟ ನೋಡುತ್ತಾ ಬಂದವರಿಗೆ ಇದಕ್ಕಿಂತ ಶಾಕಿಂಗ್ ನ್ಯೂಸ್ ಇನ್ನೊಂದಿರಲಿಕ್ಕಿಲ್ಲ.
ರೈನಾಗೆ ಏನಾಯ್ತು?
ಸುರೇಶ್ ರೈನಾ ಅವರನ್ನು ಕಡೆಗಣಿಸಲಾಯಿತೇ? ಇಲ್ಲ, ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಮಿಡ್ ಡೇ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ಸುರೇಶ್ ರೈನಾ ಅವರು ಕ್ರಿಕೆಟ್ ಆಟದಲ್ಲೇ ಆಸಕ್ತಿ ಕಳೆದುಕೊಂಡಿದ್ದಾರಂತೆ. 2015ರಲ್ಲಿ ಮದುವೆಯಾದ ಬಳಿಕ ರೈನಾ ಬದಲಾಗಿದ್ದಾರಂತೆ. ಅದರಲ್ಲೂ ಮಗಳು ಗಾರ್ಷಿಯಾ ಜನಿಸಿದ ನಂತರವಂತೂ ಫ್ಯಾಮಿಲಿ ಬಿಟ್ಟು ರೈನಾ ಕದಲುವುದು ಬಹಳ ಕಡಿಮೆಯಾಗಿಬಿಟ್ಟಿದೆ. ಉತ್ತರಪ್ರದೇಶದ ಮಾಜಿ ಕೋಚ್'ವೊಬ್ಬರೂ ಕೂಡ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ.
"ಫ್ಯಾಮಿಲಿ ಮ್ಯಾನ್ ಆದ ನಂತರ ರೈನಾ ಅವರ ಆದ್ಯತೆಗಳು ಬದಲಾಗಿವೆ. ಅವರು ತಮ್ಮ ಆಟದ ಬಗ್ಗೆ ಗಮನ ಕೊಡುತ್ತಿಲ್ಲವೆನಿಸುತ್ತದೆ. ಇಷ್ಟವಿಲ್ಲದೇ ಕ್ರಿಕೆಟ್ ಆಡುತ್ತಿರುವಂತೆ ಭಾಸವಾಗುತ್ತದೆ. ಈ ವರ್ಷ ಅವರು ಕೇವಲ 3 ರಣಜಿ ಪಂದ್ಯಗಳನ್ನು ಆಡಿದ್ದಾರೆ. ಮುಷ್ತಾಕ್ ಅಲಿ ಕಪ್, ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ಅವರು ಭಾಗವಹಿಸಲೇ ಇಲ್ಲ," ಎಂದು ಮಾಜಿ ಕೋಚ್ ಹೇಳಿದ್ದಾರೆಂದು ಮಿಡ್-ಡೇ ವರದಿ ಮಾಡಿದೆ. ರೈನಾ ಅವರ ನಿರಾಸಕ್ತಿ ಕಂಡೇ ಬಿಸಿಸಿಐನವರು ಅವರಿಗೆ ಸಿ ಕಾಂಟ್ರ್ಯಾಕ್ಟ್ ಕೂಡ ಕೊಡಲಿಲ್ಲವೆನ್ನಲಾಗಿದೆ.
ಕಂಬ್ಯಾಕ್ ಕಷ್ಟ:
ಭಾರತೀಯ ಕ್ರಿಕೆಟ್'ನಲ್ಲಿ ಈಗ ಬಹಳಷ್ಟು ಯುವ ಪ್ರತಿಭೆಗಳು ಬೆಳಗುತ್ತಿವೆ. ಈ ಹಿನ್ನೆಲೆಯಲ್ಲಿ ಸುರೇಶ್ ರೈನಾ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವುದು ಕಷ್ಟಕರವೇ ಆಗಲಿದೆ. ಐಪಿಎಲ್'ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿರುವ ಸುರೇಶ್ ರೈನಾ ಒಂದೊಮ್ಮೆ ಸ್ಫೋಟಕ ಬ್ಯಾಟಿಂಗ್'ನ ಲಯಕ್ಕೆ ಮರಳಿದರೆ ಟೀಮ್ ಇಂಡಿಯಾದ ಬಾಗಿಲು ತೆರೆಯಬಹುದು. ಆದರೆ, ಕ್ರಿಕೆಟ್'ಗಿಂತ ಕುಟುಂಬವೇ ಪ್ರಧಾನವಾಗಿರಿಸಿಕೊಂಡಿರುವ ಸುರೇಶ್ ರೈನಾರಿಂದ ಇದನ್ನು ನಿರೀಕ್ಷಿಸಲು ಆದೀತೆ?
ಇನ್ನೊಂದು ಸುದ್ದಿಯ ಪ್ರಕಾರ, ಸುರೇಶ್ ರೈನಾ ತಮ್ಮದೇ ಕಂಪನಿ ಸ್ಥಾಪಿಸಿ ವ್ಯವಹಾರಕ್ಕಿಳಿಯಲು ನಿರ್ಧರಿಸಿದ್ದಾರಂತೆ. ಟೀಮ್ ಇಂಡಿಯಾದ ಬಹಳಷ್ಟು ಹಾಲಿ ಹಾಗೂ ಮಾಜಿ ಆಟಗಾರರು ವ್ಯವಹಾರ ಕ್ಷೇತ್ರಕ್ಕೆ ಅಡಿ ಇರಿಸಿದ್ದಾರೆ. ಈಗ ರೈನಾ ಯಾವ ಬ್ಯುಸಿನೆಸ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
