'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜಿತ್ ದೀಪ್ಕೆ, ನೀಟ್ ಪೇಪರ್ ಸೋರಿಕೆ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ವಿಭಿನ್ನವಾಗಿ ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆಯ ನಡುವೆ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಎಂಬ ಹೆಸರು ಭಾರೀ ಸದ್ದು ಮಾಡುತ್ತಿದೆ. ನೀಟ್ (NEET) ಪೇಪರ್ ಸೋರಿಕೆ ಹಗರಣದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಧ್ವನಿ ಎತ್ತುತ್ತಿರುವ ಈ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದರಲ್ಲೂ ಇವರು ಪ್ರತಿಭಟನೆಯ ನಡುವೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಜನರ ಕುತೂಹಲ ಕೆರಳಿಸಿದೆ.
ಪ್ರತಿಭಟನೆಯಲ್ಲೂ ಕ್ರಿಕೆಟ್ ಕ್ರೇಜ್!
ಸಾಮಾನ್ಯವಾಗಿ ಪ್ರತಿಭಟನೆ ಎಂದರೆ ಘೋಷಣೆ, ಆಕ್ರೋಶ ಇರುತ್ತದೆ. ಆದರೆ ಅಭಿಜಿತ್ ದೀಪ್ಕೆ ಅವರ ನೇತೃತ್ವದ 'Gen-Z' ಪ್ರತಿಭಟನೆ ಸ್ವಲ್ಪ ಭಿನ್ನವಾಗಿದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರೊಂದಿಗೆ ಅಭಿಜಿತ್ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸಿಜೆಪಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ಕಾಕ್ರೋಚ್‌ಗಳೇ ಎದ್ದೇಳಿ! ಜಂತರ್ ಮಂತರ್‌ಗೆ ಬನ್ನಿ. ಇದು Gen-Z ಪ್ರತಿಭಟನೆ, ಇಲ್ಲಿ ಸ್ವಲ್ಪ ಕ್ರಿಕೆಟ್ ಇರುತ್ತೆ, ಸ್ವಲ್ಪ ಆಂದೋಲನವೂ ಇರುತ್ತೆ ಎಂದು ಬರೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಕ್ರಿಕೆಟ್ ಮಾತ್ರವಲ್ಲದೆ, ಇವರಿಗೆ ವಾಲಿಬಾಲ್ ಆಡುವುದು ಎಂದರೆ ಕೂಡ ಬಹಳ ಇಷ್ಟವಂತೆ.
ಅಭಿಜಿತ್ ದೀಪ್ಕೆ ಶಿಕ್ಷಣದ ಹಿನ್ನೆಲೆ
ಅಭಿಜಿತ್ ಕೇವಲ ಆಂದೋಲನಕಾರಿ ಮಾತ್ರವಲ್ಲ, ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಇವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮೂಲದವರು. ಪ್ರಾಥಮಿಕ ಶಿಕ್ಷಣದ ನಂತರ ಪುಣೆಯಲ್ಲಿ ಪತ್ರಿಕೋದ್ಯಮದಲ್ಲಿ (Journalism) ಪದವಿ ಪಡೆದರು. ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ ಇವರು, ಪ್ರತಿಷ್ಠಿತ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ (Boston University) 'ಪಬ್ಲಿಕ್ ರಿಲೇಶನ್ಸ್' ವಿಷಯದಲ್ಲಿ ಸ್ನಾತಕೋತ್ತರ ಪದವಿ (Masters) ಮುಗಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿದ್ದು ಹೇಗೆ?
ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ನೀಡಿದ್ದ ಒಂದು ಹೇಳಿಕೆಯಲ್ಲಿ 'ಕಾಕ್ರೋಚ್' ಎಂಬ ಪದ ಬಳಕೆಯಾಗಿತ್ತು. ಇದನ್ನು ಸ್ಫೂರ್ತಿಯಾಗಿ ಪಡೆದ ಅಭಿಜಿತ್, ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವಿಶಿಷ್ಟ ಹೆಸರಿನ ಸಂಘಟನೆ ಆರಂಭಿಸಿದರು. ಆರಂಭದಲ್ಲಿ ಆನ್‌ಲೈನ್‌ನಲ್ಲಿ ಸಣ್ಣ ಮಟ್ಟದಲ್ಲಿ ಶುರುವಾದ ಈ ಪಾರ್ಟಿಗೆ ಇಂದಿನ ಯುವ ಪೀಳಿಗೆಯಿಂದ (Gen-Z) ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸದ್ಯ ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಅಭಿಜಿತ್ ದೆಹಲಿಯಲ್ಲಿ ಬೀದಿಗಿಳಿದಿದ್ದಾರೆ. ಓದಿಕೊಂಡ ಯುವಕನೊಬ್ಬ ವಿಭಿನ್ನ ಹಾದಿಯಲ್ಲಿ ಜನರನ್ನು ಸಂಘಟಿಸಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


