ಇಂಗ್ಲೆಂಡ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಿಕ್ಸರ್ ಸಿಡಿಸಲು ಹರಸಾಹಸ ಪಟ್ಟಿದೆ.  ಅಂತಿಮ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಸಿಡಿಸಿದ 2 ಸಿಕ್ಸರ್‌ನಿಂದ ಟೀಂ ಇಂಡಿಯಾ ಉಸಿರಾಡಿತು. ವೇಗಿ ಶಾರ್ದೂಲ್ ಸಿಕ್ಸರ್ ಹಿಂದೆ ರೋಚಕ ಕತೆಯಿದೆ. ಅದೇನು? ಇಲ್ಲಿದೆ.

ಲೀಡ್ಸ್(ಜು.18): ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಮಕಾಡೆ ಮಲಗಿದ್ದರು. ಅಬ್ಬರದ ಬ್ಯಾಟಿಂಗ್ ಇಲ್ಲ, ಸಿಕ್ಸರ್‌ಗಳ ಸದ್ದಿಲ್ಲ. ದ್ವಿತೀಯ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಕತೆ ಇದಕ್ಕಿಂತ ಭಿನ್ನವಿರಲಿಲ್ಲ.

ಲೀಡ್ಸ್ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಸಿಕ್ಸರ್ ಸಿಡಿಸಲೇ ಇಲ್ಲ. ಕೊನೆಗೆ ವೇಗಿ ಶಾರ್ದೂಲ್ ಠಾಕೂರ್ 2 ಸಿಕ್ಸರ್ ಸಿಡಿಸಿ ಭಾರತದ ಮಾನ ಕಾಪಾಡಿದರು. 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಒಂದು ಸಿಕ್ಸರ್ ಸಿಡಿಸಿರಲಿಲ್ಲ.

ಅಂತಿಮ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಸಿಡಿಸಿದ ಸಿಕ್ಸರ್‌‌ನಿಂದ ಭಾರತ 250 ರನ್ ಗಡಿ ದಾಟಿತು. ಶಾರ್ದೂಲ್ ಠಾಕೂರ್‌ ಸಿಕ್ಸರ್ ಸಿಡಿಸಿರೋದಕ್ಕೆ ಯಾವುದೇ ಆಶ್ಚರ್ಯವಿಲ್ಲ. ಕಾರಣ ಠಾಕೂರ್‌ಗೆ ಸಿಕ್ಸರ್ ಹೊಸದೇನಲ್ಲ.

ಶಾಲಾ ಸಮಯದಲ್ಲಿ ಶಾರ್ದೂಲ್ ಠಾಕೂರ್ ಸಿಕ್ಸರ್ ಸಿಡಿಸೋದರಲ್ಲಿ ನಿಸ್ಸೀಮರಾಗಿದ್ದರು. ಶಾರ್ದೂಲ್ ಠಾಕೂರ್ ಸ್ವಾಮಿ ಮುಂಬೈನ ವಿವೇಕಾನಂದ ಶಾಲಾ ವಿಧ್ಯಾರ್ಥಿ. ರೋಹಿತ್ ಶರ್ಮಾ ಕೂಡ ಇದೇ ಶಾಲೆಯಲ್ಲಿ ಕಲಿತವರು. ಸ್ಕೂಲ್ ಲೆವಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಶಾರ್ದೂಲ್ ಸಿಕ್ಸರ್ ಕಿಂಗ್ ಆಗಿದ್ದರು.

ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಆಯೋಜಿಸಿದ್ದ ಹ್ಯಾರಿಸ್ ಶೀಲ್ಡ್ ವಾರ್ಷಿಕ ಕ್ರಿಕೆಟ್ ಟೂರ್ನಿಯಲ್ಲಿ ಶಾರ್ದೂಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆ ಬರೆದಿದ್ದಾರೆ. ರಾಧಾಕೃಷ್ಣ ಶಾಲೆ ವಿರುದ್ಧ ದ ಪಂದ್ಯದಲ್ಲಿ ಓವರ್‌ನ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸಿದ್ದರು. 

ಈ ಪಂದ್ಯದಲ್ಲಿ 10 ಸಿಕ್ಸರ್ ಹಾಗೂ 20 ಬೌಂಡರ್ ಬಾರಿಸಿದ ಶಾರ್ದೂಲ್ 73 ಎಸೆತದಲ್ಲಿ 160 ರನ್ ಚಚ್ಚಿದ್ದರು. ಈ ಮೂಲಕ ಜ್ಯೂನಿಯರ್ ಹಾಗೂ ಸಿನಿಯರ್ ಶಾಲಾ ವಿಭಾಗದಲ್ಲಿ ಶಾರ್ದೂಲ್ ದಾಖಲೆ ಬರೆದಿದ್ದರು.