ಒಂದು ವೇಳೆ ವಕಾರ್ ಮಾತು ಕೇಳಿ ಅಕ್ರಂ ರನೌಟ್ ಆಗಿದ್ದರೆ ಕುಂಬ್ಳೆ 10 ವಿಕೆಟ್'ಗಳ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ನವದೆಹಲಿ(ಫೆ.08): ಕೋಟ್ಲಾ ಅಂಗಳದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಒಂದೇ ಇನಿಂಗ್ಸ್'ನಲ್ಲಿ 10 ವಿಕೆಟ್ ಉರುಳಿಸಿ ಇತಿಹಾಸ ನಿರ್ಮಾಣ ಮಾಡಿ ನಿನ್ನೆಗೆ 18 ವರ್ಷಗಳೇ ಕಳೆದಿವೆ. ಈ ವೇಳೆ ಕುಂಬ್ಳೆಗೆ ಮತ್ತೊಮ್ಮೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಆದರೆ ಟ್ವಿಟರ್ ಮಾಂತ್ರಿಕ, ವಿರೇಂದ್ರ ಸೆಹ್ವಾಗ್ ಪಾಕ್ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂಗೆ ಧನ್ಯವಾದ ಅರ್ಪಿಸಿದ್ದಾರೆ.
ಕುಂಬ್ಳೆ ಸಾಧನೆ ಮಾಡಿದರೆ ವಾಸೀಂ ಅಕ್ರಂಗ್ಯಾಕೆ ಸೆಹ್ವಾಗ್ ಅಭಿನಂದನೆ ಸಲ್ಲಿಸಿದ್ರು ಅಂತ ಯೋಚನೆ ಮಾಡ್ತಾ ಇದೀರಾ.ಹಾಗಾದ್ರೆ ಈ ಸ್ಟೋರಿ ಓದಿ..
1999ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ 9 ವಿಕೆಟ್ ಉರುಳಿಸಿ ಇನ್ನೊಂದು ವಿಕೆಟ್ ಪಡೆದು ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದ್ದರು. ಆ ವೇಳೆ ಕ್ರೀಸ್'ನಲ್ಲಿ ವಕಾರ್ ಯೂನೀಸ್ ಹಾಗೂ ವಾಸೀಂ ಅಕ್ರಂ ಬ್ಯಾಟಿಂಗ್ ಮಾಡುತ್ತಿದ್ದರು.
ಈ ವೇಳೆ ವಕಾರ್ ಯೂನೀಸ್ ಬ್ಯಾಟಿಂಗ್ ಮಾಡುತ್ತಿದ್ದ ಅಕ್ರಂ ಬಳಿ ಬಂದು ರನ್ ಆಗೋಣವೇ ಎಂದು ಕೇಳಿದ್ದರಂತೆ. ಆಗ ಅಕ್ರಂ ರನ್ ಔಟ್ ಆಗೋದು ಬೇಡ. ಖಂಡಿತ ನಾನು ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ಭರವಸೆ ನೀಡಿದ್ದರಂತೆ. ಆದರೆ ಕುಂಬ್ಳೆ ಮೋಡಿಗೆ ಅಕ್ರಂ 10 ಬಲಿಯಾದರು. ಇದನ್ನೆಲ್ಲಾ ವಾಸೀಂ ಅಕ್ರಂ ಅವರೇ ಹೇಳಿಕೊಂಡಿದ್ದರು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ ವಕಾರ್ ಮಾತು ಕೇಳಿ ಅಕ್ರಂ ರನೌಟ್ ಆಗಿದ್ದರೆ ಕುಂಬ್ಳೆ 10 ವಿಕೆಟ್'ಗಳ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ ಸೆಹ್ವಾಗ್ ವಾಸೀಂ ಅಕ್ರಂ ಅವರಿಗೆ ಧನ್ಯವಾದ ಅರ್ಪಿಸಿರುವುದು..
