ಕೋಲ್ಕತಾ: ಭಾರತ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಹಾಗೂ ಸೌರವ್ ಗಂಗೂಲಿ ಕಿತ್ತಾಟದ ಪ್ರಕರಣದ ಕುತೂಹಲಕಾರಿ ಸತ್ಯವನ್ನು ವೀರೇಂದ್ರ ಸೆಹ್ವಾಗ್ ಬಹಿರಂಗಗೊಳಿಸಿದ್ದಾರೆ. ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕಲು ಚಾಪೆಲ್ ನಡೆಸುತ್ತಿದ್ದ ಸಂಚಿನ ಬಗ್ಗೆ ಗಂಗೂಲಿಗೆ ಮಾಹಿತಿ ನೀಡಿದ್ದು ನಾನೇ ಎಂದು ಸೆಹ್ವಾಗ್ ಹೇಳಿದ್ದಾರೆ.

ಇಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೆಹ್ವಾಗ್, ‘ಜಿಂಬಾಬ್ವೆ ಪ್ರವಾಸದ ವೇಳೆ ನಾನು ಹೊಟ್ಟೆ ನೋವಿನ ಕಾರಣ ನೀಡಿ ಪದೇ ಪದೇ ಮೈದಾನ ತೊರೆದು ಪೆವಿಲಿಯನ್‌'ಗೆ ತೆರಳಿದೆ. ಆ ವೇಳೆ ಶೌಚಾಲಯದ ಬಳಿ ಚಾಪೆಲ್ ಬಿಸಿಸಿಐಗೆ ಇ-ಮೇಲ್ ಕಳುಹಿಸುತ್ತಿದ್ದನ್ನು ನೋಡಿದೆ. ಆದರೆ ಅದೇನು ಎಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಮೈದಾನಕ್ಕೆ ವಾಪಸಾದ ಕೂಡಲೇ ಗಂಗೂಲಿಗೆ ಆ ಬಗ್ಗೆ ತಿಳಿಸಿ, ಚಾಪೆಲ್ ಅನುಮಾನ ಬರುವ ರೀತಿಯಲ್ಲಿ ಏನೋ ಮಾಡುತ್ತಿದ್ದಾರೆ ಎಂದು ಹೇಳಿದೆ’ ಎಂದಿದ್ದಾರೆ.

ಆ ಪ್ರವಾಸದಲ್ಲೇ ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕುವಲ್ಲಿ ಚಾಪೆಲ್ ಯಶಸ್ವಿಯಾಗಿದ್ದರು. ಗಂಗೂಲಿ ಮಾತ್ರವಲ್ಲ, ಸಚಿನ್ ತೆಂಡುಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹೇಗೆ ಭಾರತೀಯ ಕ್ರಿಕೆಟ್ ಅನ್ನು ಹಾಳು ಮಾಡಿದರು ಎಂದು ಹಲವು ವೇದಿಕೆಗಳಲ್ಲಿ ವಿವರಿಸಿದ್ದಾರೆ.