ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹಾಗೂ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದ್ದನ್ನಿಲ್ಲಿ ಸ್ಮರಿಸಬಹುದು.
ನವದೆಹಲಿ(ಜ.25): ಮುಂದಿನ ತಿಂಗಳು ನಾಲ್ಕರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೇಲೆ ಕಣ್ಣಿಡಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತ ಮಂಡಳಿಗೆ ಕೊಹ್ಲಿ ಕಿವಿಮಾತು ಹೇಳಿದ್ದಾರೆಂದು ವರದಿಯಾಗಿದೆ.
ಕೋಲ್ಕತಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ದಡ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟೋಕ್ಸ್ ಅವರ ಗುಣಗಾನ ಮಾಡಿರುವ ವಿರಾಟ್ ಕೊಹ್ಲಿ, 'ಇಂಗ್ಲೆಂಡ್ ತಂಡದ ಗೆಲುವಿಗಾಗಿ ಸ್ಟೋಕ್ಸ್ ಯಾವಾಗಲೂ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಟೆಸ್ಟ್ ಸರಣಿ ಆರಂಭವಾದಾಗಿನಿಂದ ಆತನನ್ನು ಗಮನಿಸುತ್ತಿದ್ದೇನೆ, ತಮ್ಮ ಪ್ರದರ್ಶನದ ಮೂಲಕ ತಂಡದ ಸ್ಫೂರ್ತಿಯಾಗಿದ್ದು ಮಾತ್ರವಲ್ಲದೇ ಗೆಲುವಿಗಾಗಿ ಸದಾ ಹಾತೊರೆಯುತ್ತಾರೆ ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ.
ನೀವು ಆತನ ಬಾಡಿ ಲಾಂಗ್ವೇಜ್ ನೋಡಿಯೇ ಹೇಳಬಹುದು. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್'ನಲ್ಲಿ ಆತನ ಬದ್ಧತೆ ನಿಜಕ್ಕೂ ಅಮೋಘ. ಪ್ರತಿಯೊಂದು ತಂಡವು ಇಂತಹ ಆಟಗಾರನನ್ನು ಹೊಂದಲು ಬಯಸುತ್ತದೆ ಎಂದು ಕೊಹ್ಲಿ ಇಂಗ್ಲೆಂಡ್ ಆಟಗಾರನನ್ನು ಕೊಂಡಾಡಿದ್ದಾರೆ.
ಆರ್'ಸಿಬಿ ತಂಡವು 2017ರ ಹರಾಜಿನಲ್ಲಿ 10 ಮಂದಿ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಕಳೆದ ಬಾರಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಮಲ್ಯ ಬಾಯ್ಸ್ ಈ ಬಾರಿ ಶತಾಯಗತಾಯವಾಗಿಯಾದರೂ ಪ್ರಶಸ್ತಿ ಎತ್ತಿ ಹಿಡಿಯುವ ಪಣ ತೊಟ್ಟಿದೆ. ತನ್ನ ಖಾತೆಯಲ್ಲಿ 12.80 ಕೋಟಿ ರೂಪಾಯಿ ಹೊಂದಿರುವ ಆರ್'ಸಿಬಿ ಫೆಬ್ರವರಿ ನಾಲ್ಕರಂದು ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ಮೇಲೆ ಕಣ್ಣಿಟ್ಟಿದೆ ಎಂದು ಸ್ಪೋರ್ಟ್ ಕ್ರೀಡಾ ವರದಿ ಮಾಡಿದೆ.
ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಹಾಗೂ ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆದಿದ್ದನ್ನಿಲ್ಲಿ ಸ್ಮರಿಸಬಹುದು.
