1998ರಲ್ಲಿ ಸಚಿನ್ ತೆಂಡುಲ್ಕರ್ 887 ಅಂಕಗಳನ್ನು ಕಲೆಹಾಕುವುದರೊಂದಿಗೆ ಗರಿಷ್ಠ ರೇಟಿಂಗ್ ಅಂಕ ಪಡೆದ ಭಾರತೀಯ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು.
ದುಬೈ(ಸೆ.04): ಐಸಿಸಿ ಏಕದಿನ ಬ್ಯಾಟ್ಸ್'ಮನ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಜತೆಗೆ ಸಚಿನ್ ತೆಂಡುಲ್ಕರ್ ಅವರ ಗರಿಷ್ಠ ರೇಟಿಂಗ್ ಅಂಕಗಳ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಎರಡು ಶತಕ ಹಾಗೂ 1 ಅರ್ಧಶತಕ ಸಿಡಿಸಿದ ವಿರಾಟ್ ಏಕದಿನದಲ್ಲಿ 30 ಶತಕಗಳನ್ನು ಪೂರೈಸಿದ್ದರು. ತಮ್ಮ ಅದ್ಭುತ ಆಟದಿಂದ ಕೊಹ್ಲಿ ಸದ್ಯ 887 ರೇಟಿಂಗ್ ಅಂಕ ಪಡೆದಿದ್ದಾರೆ. ಸರಣಿಗೂ ಮುನ್ನ 2ನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್'ಗಿಂತ 12 ಅಂಕ ಮುಂದಿದ್ದ ಕೊಹ್ಲಿ, ಆ ಅಂತರವನ್ನು ಈಗ 26 ಅಂಕಗಳಿಗೆ ಏರಿಸಿಕೊಂಡಿದ್ದಾರೆ.
1998ರಲ್ಲಿ ಸಚಿನ್ ತೆಂಡುಲ್ಕರ್ 887 ಅಂಕಗಳನ್ನು ಕಲೆಹಾಕುವುದರೊಂದಿಗೆ ಗರಿಷ್ಠ ರೇಟಿಂಗ್ ಅಂಕ ಪಡೆದ ಭಾರತೀಯ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಆ ದಾಖಲೆಯನ್ನು ಕೊಹ್ಲಿ ಈಗ ಸರಿಗಟ್ಟಿದ್ದು, ಮುಂಬರುವ ಸರಣಿಗಳಲ್ಲಿ ಇದೇ ಲಯ ಉಳಿಸಿಕೊಂಡಲ್ಲಿ, ಸಚಿನ್'ರ ಈ ದಾಖಲೆಯನ್ನೂ ಕೊಹ್ಲಿ ಮುರಿಯುವುದರಲ್ಲಿ ಆಶ್ಚರ್ಯವಿಲ್ಲ.
ಅಗ್ರ 10 ಬ್ಯಾಟ್ಸ್'ಮನ್'ಗಳ ಪಟ್ಟಿಗೆ ರೋಹಿತ್ ಶರ್ಮಾ ಹಾಗೂ ಎಂ.ಎಸ್.ಧೋನಿ ವಾಪಸಾಗಿದ್ದು, ಕ್ರಮವಾಗಿ 9 ಹಾಗೂ 10ನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಜಸ್'ಪ್ರೀತ್ ಬುಮ್ರಾ 5 ಪಂದ್ಯಗಳ ಸರಣಿಯಲ್ಲಿ ದಾಖಲೆಯ 15 ವಿಕೆಟ್ ಕಬಳಿಸಿದ್ದರಿಂದ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಬರೋಬ್ಬರಿ 27 ಸ್ಥಾನಗಳ ಏರಿಕೆ ಕಂಡು ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.
