ಧರ್ಮಶಾಲಾ(ಸೆ.14): ಪಂದ್ಯವೊಂದರ ಕುರಿತು ಟ್ವಿಟ್ಟರ್’ನಲ್ಲಿ ನೆನಪು ಹಂಚಿಕೊಳ್ಳಲು ಹೋಗಿ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ನಿವೃತ್ತಿ ಊಹಾಪೋಹಕ್ಕೆ ಕಾರಣವಾಗಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಾಠ ಕಲಿತಿದ್ದಾರಂತೆ.

ಇನ್ನು ಮುಂದೆ ಟ್ವೀಟ್ ಮಾಡುವ ಮುನ್ನ ಎರಡು ಸಲ ಯೋಚನೆ ಮಾಡಿ ಟ್ವೀಟ್ ಮಾಡುತ್ತೇನೆ ಎಂದು ವಿರಾಟ್ ಕೊಹ್ಲಿ ಮಾರ್ಮಿಕವಾಗಿ ನುಡಿದಿದ್ದಾರೆ.

ಇಡೀ ವಿಶ್ವ ನನ್ನ ರೀತಿಯಲ್ಲಿಯೇ ಯೋಚಿಸುವುದಿಲ್ಲ ಎಂಬ ಪಾಠವನ್ನು ಕಲಿತಿದ್ದೇನೆ. ಧೋನಿ ನಿವೃತ್ತಿ ಕಲ್ಪನೆ ಮಾಡಿಕೊಂಡು ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಾಕಿರಲಿಲ್ಲ. ಆದರೆ ನನ್ನ ಅಭಿಪ್ರಾಯವನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸಲಾಗಿದೆ ಎಂದು ಕೊಹ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಕಳೆದ ಗುರುವಾರ ತಮ್ಮ ಖಾತೆಯಲ್ಲಿ ಧೋನಿ ಹಾಗೂ ತಾವು ಬ್ಯಾಟಿಂಗ್ ಮಾಡುತ್ತಿದ್ದ ಪೋಟೋ ಹಾಕಿ, ಮಾಹಿ ನನಗೆ ಫಿಟ್ನೆಸ್ ಟೆಸ್ಟ್’ಗೆ ಒಳಪಡಿಸಿದ ರೀತಿ ಓಡಿಸಿದ್ದರು ಎಂದು ಬರೆದಿದ್ದರು. 

ಕೋಹ್ಲಿ ಪೋಸ್ಟ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಧೋನಿ ನಿವೃತ್ತಿಗೊಳ್ಳುವ ಬಗ್ಗೆ ಚರ್ಚೆಗಳು ವ್ಯಾಪಕವಾಗಿ ನಡೆದಿದ್ದವು. ಅಲ್ಲದೆ ಸಂಜೆ ಏಳು ಗಂಟೆಗೆ ಧೋನಿ ನಿವೃತ್ತಿ ಕುರಿತು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು.