ಎರಡನೇ ವಿಕೆಟ್'ಗೆ ವಿರಾಟ್ ಹಾಗೂ ರೋಹಿತ್ ಜೋಡಿ 219ರನ್'ಗಳ ಜತೆಯಾಟವಾಡಿತು. ಕೇವಲ 96 ಎಸೆತಗಳಲ್ಲಿ 131ರನ್ ಬಾರಿಸಿದ್ದ ಕೊಹ್ಲಿ, ಲಸಿತ್ ಮಾಲಿಂಗಾಗೆ 300ನೇ ಬಲಿಯಾದರು.

ಕೊಲಂಬೊ(ಆ.31): ಆರಂಭಿಕ ಬ್ಯಾಟ್ಸ್'ಮನ್ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 375ರನ್'ಗಳ ಬೃಹತ್ ಮೊತ್ತ ಕಲೆಹಾಕಿದೆ.

ಇಲ್ಲಿನ ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್'ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿ ಲಂಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿತು. 28 ವರ್ಷದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್'ನಲ್ಲಿ ವೃತ್ತಿ ಜೀವನದ 29ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಲಂಕಾ ದಿಗ್ಗಜ ಕ್ರಿಕೆಟಿಗ ಸನತ್ ಜಯಸೂರ್ಯ ಶತಕಗಳ ದಾಖಲೆಯನ್ನು ಹಿಂದಿಕ್ಕಿದರು. ಇದೀಗ ಸಚಿನ್ ತೆಂಡೂಲ್ಕರ್(49) ಹಾಗೂ ರಿಕಿ ಪಾಂಟಿಂಗ್(30) ನಂತರದ ಮೂರನೇ ಸ್ಥಾನಕ್ಕೆ ವಿರಾಟ್ ಲಗ್ಗೆಯಿಟ್ಟಿದ್ದಾರೆ.

ಎರಡನೇ ವಿಕೆಟ್'ಗೆ ವಿರಾಟ್ ಹಾಗೂ ರೋಹಿತ್ ಜೋಡಿ 219ರನ್'ಗಳ ಜತೆಯಾಟವಾಡಿತು. ಕೇವಲ 96 ಎಸೆತಗಳಲ್ಲಿ 131ರನ್ ಬಾರಿಸಿದ್ದ ಕೊಹ್ಲಿ, ಲಸಿತ್ ಮಾಲಿಂಗಾಗೆ 300ನೇ ಬಲಿಯಾದರು.

ವಿರಾಟ್ ಒಪ್ಪಿಸಿದ ಬೆನ್ನಲ್ಲೇ ಮತ್ತೊಂದು ಶತಕ ಸಿಡಿಸಿದ ರೋಹಿತ್ ಶರ್ಮಾ 104 ರನ್ ಬಾರಿಸಿ ಮ್ಯಾಥ್ಯೂಸ್'ಗೆ ವಿಕೆಟ್ ಒಪ್ಪಿಸಿದರು. ಒಂದೇ ಓವರ್'ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಲಂಕಾ ಅಲ್ಪಕಾಲ ಮೇಲುಗೈ ಸಾಧಿಸಲು ಮ್ಯಾಥ್ಯೂಸ್ ನೆರವಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಮನೀಶ್ ಪಾಂಡೆ ಹಾಗೂ ಎಂಎಸ್ ಧೋನಿ ತಂಡವನ್ನು 350ರ ಗಡಿ ದಾಟಿಸುವಲ್ಲಿ ಸಫಲವಾದರು. ಮನೀಶ್ ಪಾಂಡೆ ಅಜೇಯ 50 ರನ್ ಬಾರಿಸಿದರೆ, 300ನೇ ಪಂದ್ಯವಾಡುತ್ತಿರುವ ಧೋನಿ ಅಜೇಯ 49ರನ್ ಬಾರಿಸಿದರು.

ಸಂಕ್ಷಿಪ್ತ ಸ್ಕೋರ್:

ಭಾರತ : 375/5

ವಿರಾಟ್ ಕೊಹ್ಲಿ: 131

ರೋಹಿತ್ ಶರ್ಮಾ: 104

ಆ್ಯಂಜಲೋ ಮ್ಯಾಥ್ಯೂಸ್ : 24/2

ವಿವರ ಅಪೂರ್ಣ