ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಅಗ್ರಸ್ಥಾನವನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡದವರು ಲೀಗ್'ನಿಂದಲೇ ಹೊರಬಿದ್ದಿದ್ದರಿಂದ ಎರಡು ವಿಭಾಗದಲ್ಲೂ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ.
ದುಬೈ(ಜೂ.13): ಐಸಿಸಿ ನೂತನವಾಗಿ ಪ್ರಕಟಿಸಿದ ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್'ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಈ ವರ್ಷದ ಜನವರಿಯ ಬಳಿಕ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವಲ್ಲಿ ಕೊಹ್ಲಿ ಸಫಲವಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಲೀಗ್ ಹಂತದ ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಜೊತೆಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕೊಹ್ಲಿ, ಆಸೀಸ್'ನ ಡೇವಿಡ್ ವಾರ್ನರ್ ಮತ್ತು ದ.ಆಫ್ರಿಕಾದ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಈ ವರ್ಷದ ಫೆಬ್ರವರಿ 25ರಿಂದಲೂ ಮೊದಲ ಸ್ಥಾನದಲ್ಲಿದ್ದ ಎಬಿ ಡಿವಿಲಿಯರ್ಸ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ತೋರಲು ವಿಫಲರಾಗಿದ್ದರು. ಹಾಗಾಗಿ ಎಬಿಡಿ ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
862 ಅಂಕಗಳಿಂದ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ ಕೇವಲ ಕೊಹ್ಲಿಗಿಂತ ಒಂದು ಅಂಕ ಹಿನ್ನಡೆಯೊಂದಿಗೆ (861) 2ನೇ ಸ್ಥಾನ, ಎಬಿ ಡಿವಿಲಿಯರ್ಸ್ (847) 3 ನೇ ಸ್ಥಾನ, ಜೋ ರೂಟ್ (798) 4ನೇ ಸ್ಥಾನ, ಕೇನ್ ವಿಲಿಯಮ್ಸನ್ (779) 5ನೇ ಸ್ಥಾನದಲ್ಲಿದ್ದಾರೆ. ಭರ್ಜರಿ ಶತಕದ ಮೂಲಕ ಗಮನಸೆಳೆದಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 10ನೇ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ 13 ಮತ್ತು ಎಂ.ಎಸ್. ಧೋನಿ 14 ನೇ ಸ್ಥಾನದಲ್ಲಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಸ್ ಹ್ಯಾಜಲ್' ವುಡ್ ಅಗ್ರಸ್ಥಾನಕ್ಕೇರಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬೌಲಿಂಗ್'ನಲ್ಲಿ ಅಗ್ರಸ್ಥಾನದಲ್ಲಿದ್ದ ಇಮ್ರಾನ್ ತಾಹೀರ್ ಮೊದಲ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಇನ್ನು ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ 13 ಸ್ಥಾನ ಮೇಲಕ್ಕೆ ಜಿಗಿದಿದ್ದು 23ನೇ ಸ್ಥಾನ ಪಡೆದಿದ್ದಾರೆ. ಭಾರತದ ಯಾವೊಬ್ಬ ಬೌಲರ್ ಕೂಡಾ ಟಾಪ್ 20ರೊಳಗೆ ಕಾಣಿಸಿಕೊಂಡಿಲ್ಲ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಅಗ್ರಸ್ಥಾನವನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡದವರು ಲೀಗ್'ನಿಂದಲೇ ಹೊರಬಿದ್ದಿದ್ದರಿಂದ ಎರಡು ವಿಭಾಗದಲ್ಲೂ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಶಕೀಬ್-ಅಲ್ ಹಸನ್ ಅಗ್ರಸ್ಥಾನದಲ್ಲಿದ್ದಾರೆ.
