ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದೆ. ಪ್ರಯಾಣಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೋಜು ಮಸ್ತಿ ಹೇಗಿತ್ತು? ಇಲ್ಲಿದೆ ವಿವರ.
ದೆಹಲಿ(ಜೂ.23): ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಇಂದು ಟೀಂ ಇಂಡಿಯಾ, ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿದೆ. ಪ್ರಯಾಣಕ್ಕಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ಪುಟಾಣಿ ಅಭಿಮಾನಿ ಜೊತೆ ಫೋಟೋ ತೆಗೆಸಿಕೊಂಡರು.
ಪುಟಾಣಿ ಹುಡುಗಿಯ ಮನವಿಗೆ ಸ್ಪಂದಿಸಿದ ಕೊಹ್ಲಿ, ಫೋಟೋ ಕ್ಲಿಕ್ಕಿಸಿಕೊಂಡರು. ಬಳಿಕ ವಿಮಾನ ಹತ್ತಿದ ಕ್ರಿಕೆಟಿಗರು ಎಂದಿನಂತೆ ಮಸ್ತಿಯಲ್ಲಿ ತೊಡಗಿದರು. ರೋಹಿತ್ ಶರ್ಮಾ,ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್ ಮಸ್ತಿ ಫೋಟೋಗಳು ಇದೀಗ ವೈರಲ್ ಆಗಿದೆ.
ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಮ್ ಎಸ್ ಧೋನಿ ಇದೀಗ ಮತ್ತೆ ಕ್ರಿಕೆಟ್ ಅಖಾಡಕ್ಕೆ ಇಳಿಯುತ್ತಿದ್ದಾರೆ. ಕೊಹ್ಲಿ ಇಂಜುರಿಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ಭಾರತ ಜೂನ್ 27 ಹಾಗೂ 29 ರಂದು ಐರ್ಲೆಂಡ್ ವಿರುದ್ಧ 2 ಟಿ-ಟ್ವೆಂಟಿ ಪಂದ್ಯ ಆಡಲಿದೆ. ಬಳಿಕ ಜುಲೈ 3 ರಿಂದ ಇಂಗ್ಲೆಂಡ್ ವಿರುದ್ಧ 3 ಟಿ-ಟ್ವೆಂಟಿ, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.
