ಕೋಲ್ಕತಾ(ಏ.19): ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಹಾಗೂ ಮೊಯಿನ್ ಆಲಿ ಸಿಡಿಸಿದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು,KKR ವಿರುದ್ಧ ಅಬ್ಬರಿಸಿದೆ. ನಿಗಿದತ 20 ಓವರ್‌ಗಳಲ್ಲಿ RCB 3 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿದೆ. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 214 ರನ್ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ RCB ಆರಂಭ ಉತ್ತಮವಾಗಿರಲಿಲ್ಲ. ಪಾರ್ಥೀವ್ ಪಟೇಲ್ 11 ರನ್ ಸಿಡಿಸಿ ಔಟಾದರು. ಇನ್ನು ಅಕ್ಷದೀಪ್ ನಾಥ್ 13 ರನ್‌ಗೆ ಸುಸ್ತಾದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮೊಯಿನ್ ಆಲಿ ಜೊತೆಯಾಟದಿಂದ  RCB ಚೇತರಿಸಿಕೊಂಡಿತು. ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರೆ, ಮೊಯಿನ್ ಆಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಆಲಿ ಹಾಗೂ ಕೊಹ್ಲಿ ಅರ್ಧಶತಕ ಸಿಡಿಸಿದರು. ಮೊಯಿನ್ ಆಲಿ 28 ಎಸೆತದಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 66 ರನ್ ಸಿಡಿಸಿ ಔಟಾದರು.  ಆಲಿ ವಿಕೆಟ್ ಪತನದ ಬಳಿಕ ಆರ್ಭಟಿಸಿದ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಕ್ರಿಕೆಟ್‌ನಲ್ಲಿ 5ನೇ ಶತಕ ದಾಖಲಿಸಿದರು. ಶತಕ ಸಿಡಿಸಿದ ಬೆನ್ನಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿತು. ಕೊಹ್ಲಿ 100 ರನ್ ಸಿಡಿಸಿದರೆ, ಮಾರ್ಕಸ್ ಸ್ಟೊಯ್ನಿಸ್ ಅಜೇಯ 11 ರನ್ ಭಾರಿಸಿದರು. ಈ ಮೂಲಕ RCB 3 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿದೆ.