ಮೂರೂ ಮಾದರಿಗಳಲ್ಲಿ ಸಮರ್ಥ ಬ್ಯಾಟ್ಸ್‌ಮನ್ ಎನಿಸಿರುವ ವಿರಾಟ್ ಕೊಹ್ಲಿ, ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 11 ಪಂದ್ಯಗಳಿಂದ 59.05ರ ಸರಾಸರಿಯಲ್ಲಿ 1002 ರನ್ ಪೇರಿಸಿದ್ದಾರೆ. ಇವುಗಳಲ್ಲಿ 7 ಶತಕಗಳೂ ಸೇರಿವೆ.

ಮುಂಬೈ(ಡಿ.10): ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, 2016ರ ಕ್ರಿಕೆಟ್ ಋತುವಿನಲ್ಲಿ ಟೆಸ್ಟ್ ಮಾದರಿಯಲ್ಲಿ ವೈಯಕ್ತಿಕವಾಗಿ ಒಂದು ಸಾವಿರ ರನ್‌'ಗಿಂತಲೂ ಹೆಚ್ಚು ಮೊತ್ತ ದಾಖಲಿಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 3ನೇ ದಿನವಾದ ಶನಿವಾರ, ಭಾರತದ ಇನಿಂಗ್ಸ್‌ನ 68.4ನೇ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಈ ಸಾಧನೆಗೆ ಅವರು ಭಾಜನರಾದರು.

ಟೆಸ್ಟ್, ಏಕದಿನ ಹಾಗೂ ಟಿ20ಗಳ ಮೂರೂ ಮಾದರಿಗಳಲ್ಲಿ ಸಮರ್ಥ ಬ್ಯಾಟ್ಸ್‌ಮನ್ ಎನಿಸಿರುವ ಅವರು, ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 11 ಪಂದ್ಯಗಳಿಂದ 59.05ರ ಸರಾಸರಿಯಲ್ಲಿ 1002 ರನ್ ಪೇರಿಸಿದ್ದಾರೆ. ಇವುಗಳಲ್ಲಿ 7 ಶತಕಗಳೂ ಸೇರಿವೆ. ಅಕ್ಟೋಬರ್ ತಿಂಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಗಳಿಸಿದ 211 ರನ್, ಈ ವರ್ಷ ಅವರು ಗಳಿಸಿದ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ, ಸಚಿನ್ ತೆಂಡೂಲ್ಕರ್ (1997) ಹಾಗೂ ರಾಹುಲ್ ದ್ರಾವಿಡ್ (2006) ಒಂದೇ ಕ್ರಿಕೆಟ್ ಋತುವಿನಲ್ಲಿ ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದರು.

ಇದಲ್ಲದೆ ನಾಲ್ಕು ಸಾವಿರ ರನ್ ಪೂರೈಸಿದ 14ನೇ ಭಾರತೀಯ ಬ್ಯಾಟ್ಸ್'ಮನ್ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ. ಜೊತೆಗೆ ಈ ಸಾಧನೆ ಮಾಡಿದ ಎರಡನೇ ಅತಿ ಕಿರಿಯ ಬ್ಯಾಟ್ಸ್'ಮನ್ ಎಂಬ ಅಗ್ಗಳಿಕೆಯೂ ಕೊಹ್ಲಿ ಪಾಲಾಯಿತು. ನಾಲ್ಕು ಸಾವಿರ ರನ್ ಪೂರೈಸಿದ ಅತಿ ಕಿರಿಯ ಭಾರತೀಯ ಬ್ಯಾಟ್ಸ್'ಮನ್ ಎನ್ನುವ ಶ್ರೇಯ ಇನ್ನೂ ಸಚಿನ್ ಹೆಸರಿನಲ್ಲಿಯೇ ಇದೆ.

ವಿಶ್ವದ ಆಟಗಾರರ ಲೆಕ್ಕಾಚಾರದಲ್ಲಿ, ಈ ವರ್ಷ ವೈಯಕ್ತಿಕ ಸಾವಿರ ರನ್ ಗಡಿ ದಾಟಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೊಹ್ಲಿ 4ನೆಯವರಾಗಿದ್ದಾರೆ. ಮೊದಲ ಮೂರು ಸ್ಥಾನಗಳಲ್ಲಿ ಇಂಗ್ಲೆಂಡ್‌ನವರಾದ ಜಾನಿ ಬೇರ್‌ಸ್ಟೋ (16 ಪಂದ್ಯ, 1369), ಜೊ ರೂಟ್ (16, 1306), ಅಲಸ್ಟೇರ್ ಕುಕ್ (16, 1193) ಇದ್ದರೆ, ಐದನೇ ಸ್ಥಾನದಲ್ಲಿ ಇಂಗ್ಲೆಂಡ್‌ನವರೇ ಆದ ಮೊಯೀನ್ ಅಲಿ (16, 888) ಇದ್ದಾರೆ.

2ನೇ ಸ್ಥಾನ ಅಬಾಧಿತ

ಈ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯಿಂದ (ಐಸಿಸಿ) ಬಿಡುಗಡೆಗೊಂಡಿರುವ ಏಕದಿನ ಕ್ರಿಕೆಟಿಗರ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (848 ರೇಟಿಂಗ್ ಅಂಕ) ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಅವರಿಗಿಂತ ಕೇವಲ 2 ಅಂಕಗಳ ಹಿಂದಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತೃತೀಯ ಸ್ಥಾನದಲ್ಲಿದ್ದಾರೆ. ಈ ಹಿಂದೆ, ಕೊಹ್ಲಿ, ವಾರ್ನರ್‌'ಗಿಂತ 62 ಅಂಕಗಳ ಹಿನ್ನಡೆ ಹೊಂದಿದ್ದರು. ಆದರೆ, ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮಿಂಚಿನ ಪ್ರದರ್ಶನ ತೋರಿ, ಈ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (861) ಈ ಪಟ್ಟಿಯ ನಂಬರ್‌ಒನ್ ಸ್ಥಾನದಲ್ಲಿದ್ದಾರೆ.