ನವದೆಹಲಿ(ಸೆ.15): ಭಾರತದ ಉದಯೋನ್ಮುಖ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ತನ್ನ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

2014ರಲ್ಲಿ ಆಸೀಸ್ ಎದುರು ಟೆಸ್ಟ್'ಗೆ ಪಾದಾರ್ಪಣೆ ಮಾಡಿದ ರಾಹುಲ್ ಸಾಂಪ್ರದಾಯಿಕ ಕ್ರಿಕೆಟ್'ಗೆ ಮಾತ್ರ ಸೂಕ್ತ ಎಂಬ ಮಾತುಗಳು ಕ್ರೀಡಾವಲಯದಲ್ಲಿ ಕೇಳಿಬಂದಿದ್ದವು. ಆದರೆ 2016ರ ಐಪಿಎಲ್ ಹೊಡಿಬಡಿ ಆಟಕ್ಕೂ ಸೈ ಎನಿಸಿಕೊಂಡರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿರುವ ರಾಹುಲ್ ಆರಂಭಿಕ ಆಟಗಾರರಾಗಿ ಸಾಕಷ್ಟು ಯಶಸ್ವಿಯಾದರು. ಈ ನನ್ನ ಯಶಸ್ಸಿನ ಹಿಂದೆ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಪಾತ್ರವೂ ಇದೆ ಎಂದು ಹೇಳಿದ್ದಾರೆ.

ವಿರಾಟ್ ಹಾಗೂ ಎಬಿಡಿ ಅವರ ತಾಂತ್ರಿಕ ಸಲಹೆಯಿಂದ ನನ್ನ ಬ್ಯಾಟಿಂಗ್ ಕೌಶಲ್ಯ ಹೆಚ್ಚಾಗಲು ಸಹಾಯವಾಯಿತು. ದೇಶಕ್ಕಾಗಿ ಇನ್ನಷ್ಟು ಆಟವಾಡಲು ಬಯಸುತ್ತೇನೆ ಎಂದು ಕನ್ನಡಿಗ ರಾಹುಲ್ ತಿಳಿಸಿದ್ದಾರೆ.

ಸುರೇಶ್ ರೈನಾ ಹಾಗೂ ಕೆ.ಎಲ್ ರಾಹುಲ್ ಮಾತ್ರ ಏಕದಿನ, ಟೆಸ್ಟ್ ಹಾಗೂ ಟಿ20 ಮೂರೂ ವಿಭಾಗದಲ್ಲಿ ಶತಕ ಬಾರಿಸಿದ ಭಾರತೀಯ ಆಟಗಾರರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.