ನವದೆಹಲಿ[ಡಿ.06]: ವಿರಾಟ್‌ ಕೊಹ್ಲಿ ಕ್ರಿಕೆಟ್‌ ಮೈದಾನದಲ್ಲಿ ದಾಖಲೆಗಳ ಮೇಲೆ ದಾಖಲೆಗಳು ಬರೆಯುತ್ತಿದ್ದಂತೆ ಮೈದಾನದಾಚೆಯೂ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಕೊಹ್ಲಿ ಈ ವರ್ಷವೂ ಭಾರತದ ಶ್ರೀಮಂತ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಆದರೆ ಗಮನಾರ್ಹ ಸಂಗತಿಯೆಂದರೆ ಅವರ ಗಳಿಕೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಏರಿಕೆಯಾಗಿದೆ. 2017ರಲ್ಲಿ 100.72 ಕೋಟಿ ಗಳಿಸಿದ್ದ ವಿರಾಟ್‌, 2018ರಲ್ಲಿ 228.09 ಕೋಟಿ ಸಂಪಾದನೆ ಮಾಡಿದ್ದಾರೆ.

ಫೋರ್ಬ್ಸ್‌ ದೇಶದ ಅಗ್ರ 100 ಸೆಲೆಬ್ರಿಟಿಗಳ ಪಟ್ಟಿಪ್ರಕಟಿಸಿದ್ದು, ಸತತ 3ನೇ ವರ್ಷ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (253.25 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟಾರೆ ವಿರಾಟ್‌ 2ನೇ ಸ್ಥಾನ ಪಡೆದಿದ್ದು, ಕ್ರೀಡಾಪಟುಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.

ಬಿಸಿಸಿಐ ಕೇಂದ್ರ ಗುತ್ತಿಗೆ, ವೇತನ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿಯಿಂದ ಪಡೆಯುವ 17 ಕೋಟಿ ಸಂಭಾವನೆ ಕೊಹ್ಲಿ ಗಳಿಕೆಗೆ ಹೆಚ್ಚಿನ ಕೊಡುಗೆಯನ್ನೇನೂ ನೀಡಿಲ್ಲ. ಜಾಹೀರಾತು ಒಪ್ಪಂದಗಳಿಂದಲೇ ಬಹುಪಾಲು ಗಳಿಕೆಯಾಗಿದೆ. ಕೊಹ್ಲಿ 20ಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್‌ಗಳಿಗೆ ರಾಯಭಾರಿಯಾಗಿದ್ದು, ಜಾಹೀರಾತು ಕ್ಷೇತ್ರವನ್ನು ಆಳುತ್ತಿದ್ದಾರೆ.

ಕ್ರಿಕೆಟಿಗರಾದ ಜಸ್‌ಪ್ರೀತ್‌ ಬೂಮ್ರಾ, ಮನೀಶ್‌ ಪಾಂಡೆ ಮೊದಲ ಬಾರಿಗೆ ಅಗ್ರ 100ರಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಕೇವಲ .3.04 ಕೋಟಿ ಇದ್ದ ಹಾರ್ದಿಕ್‌ ಪಾಂಡ್ಯ ಗಳಿಕೆ ಈ ವರ್ಷ .28.46 ಕೋಟಿಗೆ ಏರಿಕೆಯಾಗಿದೆ.

ಧೋನಿಗೆ 2ನೇ ಸ್ಥಾನ:

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, 101.77 ಕೋಟಿ ಗಳಿಕೆಯೊಂದಿಗೆ ಕ್ರೀಡಾಪಟುಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಅಗ್ರ 100ರ ಪಟ್ಟಿಯಲ್ಲಿ ಧೋನಿಗೆ 5ನೇ ಸ್ಥಾನ ಸಿಕ್ಕಿದೆ. ಅಗ್ರ 10 ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿರುವ ಮತ್ತೊಬ್ಬ ಕ್ರೀಡಾಪಟು ಸಚಿನ್‌ ತೆಂಡುಲ್ಕರ್‌. 2018ರಲ್ಲಿ ಸಚಿನ್‌ 80 ಕೋಟಿ ಸಂಪಾದಿಸಿದ್ದಾರೆ. ಅಗ್ರ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಒಟ್ಟು 21 ಕ್ರೀಡಾಪಟುಗಳಿದ್ದಾರೆ.

ರಾಜ್ಯದ ಮೂವರು: ಅಗ್ರ 100 ಸೆಲೆಬ್ರಿಟಿಗಳ ಪೈಕಿ ಕರ್ನಾಟಕದ ಮೂವರು ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. 16.48 ಕೋಟಿ ಗಳಿಕೆಯೊಂದಿಗೆ ಕ್ರಿಕೆಟಿಗ ಕೆ.ಎಲ್‌.ರಾಹುಲ್‌, ರಾಜ್ಯದ ಶ್ರೀಮಂತ ಕ್ರೀಡಾಪಟು ಎನಿಸಿದ್ದಾರೆ. ಅವರಿಗೆ ಒಟ್ಟಾರೆ 59ನೇ ಸ್ಥಾನ ಸಿಕ್ಕಿದೆ. ಮೊದಲ ಬಾರಿಗೆ ಅಗ್ರ 100ರಲ್ಲಿ ಸ್ಥಾನ ಪಡೆದಿರುವ ಮನೀಶ್‌ ಪಾಂಡೆ 13.08 ಕೋಟಿ ಗಳಿಕೆಯೊಂದಿಗೆ 77ನೇ ಸ್ಥಾನ ಪಡೆದರೆ, ಟೆನಿಸಿಗ ರೋಹನ್‌ ಬೋಪಣ್ಣ 3.27 ಕೋಟಿ ಗಳಿಕೆಯೊಂದಿಗೆ 99ನೇ ಸ್ಥಾನದಲ್ಲಿದ್ದಾರೆ.

ಇಬ್ಬರೇ ಮಹಿಳಾ ಕ್ರೀಡಾಪಟುಗಳು!

ಅಗ್ರ 100 ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬ್ಯಾಡ್ಮಿಂಟನ್‌ ತಾರೆಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್‌ ಸ್ಥಾನ ಪಡೆದಿದ್ದಾರೆ. ಮಹಿಳಾ ಕ್ರೀಡಾಪಟುಗಳ ಪೈಕಿ ಪಟ್ಟಿಯಲ್ಲಿರುವುದು ಇವರಿಬ್ಬರೇ. ಸಿಂಧು 36.5 ಕೋಟಿ ಗಳಿಕೆಯೊಂದಿಗೆ 20ನೇ ಸ್ಥಾನದಲ್ಲಿದ್ದಾರೆ. ಕ್ರೀಡಾಪಟುಗಳ ಪೈಕಿ ಸಿಂಧುಗೆ 4ನೇ ಸ್ಥಾನ. ಇನ್ನು ಸೈನಾ 16.54 ಕೋಟಿ ಗಳಿಕೆಯೊಂದಿಗೆ 58ನೇ ಸ್ಥಾನ ಪಡೆದಿದ್ದಾರೆ.