ವೃತ್ತಿ ಜೀವನದಲ್ಲಿ ಅದ್ಭುತ ಫಾರ್ಮ್'ನಲ್ಲಿರುವ ಕೊಹ್ಲಿ ಟೆಸ್ಟ್ ಕ್ರಿಕೆಟ್'ನಲ್ಲಿ 16ನೇ ಶತಕ ಸಿಡಿಸಿ ಸಂಭ್ರಮಿಸಿದರು.
ಹೈದರಾಬಾದ್(ಫೆ.09): ಆರಂಭಿಕ ಮುರುಳಿ ವಿಜಯ್(108) ಹಾಗೂ ನಾಯಕ ವಿರಾಟ್ ಕೊಹ್ಲಿ ಅಜೇಯ(111*) ಶತಕ ಮತ್ತು ಚೇತೇಶ್ವರ ಪೂಜಾರ ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಇಲ್ಲಿನ ರಾಜೀವ್ ಗಾಂಧಿ ಅಮತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆರಂಬಿಕ ಆಟಗಾರ ಕೆ.ಎಲ್ ರಾಹುಲ್ ಮೊದಲ ಓವರ್'ನಲ್ಲೇ ಟಸ್ಕಿನ್ ಅಹ್ಮದ್ ಬೌಲಿಂಗ್'ನಲ್ಲಿ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಎರಡನೇ ವಿಕೆಟ್'ಗೆ ಜತೆಯಾದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ ಪೂಜಾರ ಹಾಗೂ ಮುರುಳಿ ವಿಜಯ್ ಭರ್ಜರಿ ಜೊತೆಯಾಟ ನೀಡಿದರು. ಎರಡನೇ ವಿಕೆಟ್'ಗೆ 178 ರನ್'ಗಳ ಜೊತೆಯಾಟ ನೀಡಿದ ಈ ಜೋಡಿ ಬಾಂಗ್ಲ ಬೌಲರ್'ಗಳನ್ನು ಕಾಡಿದರು. ಅರ್ಧಶತಕ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಪೂಜಾರ(83) ವಿಕೆಟ್ ಕೀಪರ್ ಮುಷ್ತಿಕರ್ ರಹೀಮ್'ಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿದರು.
ಇದಾದ ನಂತರ ವೈಯುಕ್ತಿಕ 9ನೇ ಶತಕ ಬಾರಿಸಿದ ವಿಜಯ್ ಕೆಲಹೊತ್ತಿನಲ್ಲೇ ತೈಜುಲ್ ಇಸ್ಲಾಮ್'ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ವಿಜಯ್ ಅವರ ಸೊಗಸಾದ ಇನಿಂಗ್ಸ್'ನಲ್ಲಿ 12 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಕೂಡ ಸೇರಿತ್ತು.
ಕಮಾಲ್ ಮಾಡಿದ ಕೊಹ್ಲಿ
ವೃತ್ತಿ ಜೀವನದಲ್ಲಿ ಅದ್ಭುತ ಫಾರ್ಮ್'ನಲ್ಲಿರುವ ಕೊಹ್ಲಿ ಟೆಸ್ಟ್ ಕ್ರಿಕೆಟ್'ನಲ್ಲಿ 16ನೇ ಶತಕ ಸಿಡಿಸಿ ಸಂಭ್ರಮಿಸಿದರು. ಕೇವಲ 130 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ದಾರೆ. ಆರಂಭದಿಂದಲೂ ನಿರಾಯಾಸವಾಗಿ ಬ್ಯಾಟ್ ಬೀಸಿದ ಕೊಹ್ಲಿ ಚುರುಕಾಗಿ ರನ್ ಮೊತ್ತ ಹೆಚ್ಚಿಸಲು ಮುಂದಾದರು. ನಾಯಕ ಕೊಹ್ಲಿಗೆ ತಕ್ಕ ಸಾಥ್ ನೀಡಿರುವ ಅಜಿಂಕ್ಯಾ ರಹಾನೆ 45 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಭಾರತ; 356/3
ವಿರಾಟ್ ಕೊಹ್ಲಿ- 111*
ಮುರುಳಿ ವಿಜಯ್- 108
ಬೌಲಿಂಗ್
ತೈಜುಲ್ ಇಸ್ಲಾಂ 50/1
ಟಸ್ಕೀನ್ ಅಹ್ಮದ್ 58/1
