ವಿಜಯ್ ಹಜಾರೆ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಬೆಂಗಳೂರಿನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸೋ ಮೂಲಕ ಫೈನಲ್ ಪ್ರವೇಶಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

ಬೆಂಗಳೂರು(ಅ.18): ವಿಜಯ್‌ ಹಜಾರೆ ಏಕದಿನ ಪಂದ್ಯಾವಳಿಯ ಫೈನಲ್‌ಗೆ ಮುಂಬೈ ತಂಡ ಪ್ರವೇಶಿಸಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಮುಂಬೈ, ಹೈದರಾಬಾದ್‌ ವಿರುದ್ಧ ವಿಜೆಡಿ ನಿಯಮದನ್ವಯ 60 ರನ್‌ಗಳ ಗೆಲುವು ದಾಖಲಿಸಿತು. 

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ತಂಡ ರೋಹಿತ್‌ ರಾಯುಡು (121) ಭರ್ಜರಿ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 246 ರನ್‌ಗಳಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಪೃಥ್ವಿ ಶಾ (61), ಶ್ರೇಯಸ್‌ ಅಯ್ಯರ್‌ (55) ರನ್‌ ನೆರವಿನಿಂದ 25 ಓವರ್‌ಗಳಲ್ಲಿ 2 ವಿಕೆಟ್‌ಗೆ 155 ರನ್‌ಗಳಿಸಿತು. 

ಈ ವೇಳೆ ಮಳೆ ಸುರಿದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಗುರುವಾರ ನಡೆಯಲಿರುವ 2ನೇ ಸೆಮೀಸ್‌ನಲ್ಲಿ ದೆಹಲಿ ಹಾಗೂ ಜಾರ್ಖಂಡ್‌ ತಂಡಗಳು ಮುಖಾಮುಖಿಯಾಗಲಿವೆ. ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌ 246/8, ಮುಂಬೈ 155/2