ಕ್ರಿಕೆಟ್ ನಲ್ಲಿ ಪ್ರತಿದಿನ ಹೊಸ ಹೊಸ ದಾಖಲೆಗಳು ನಿರ್ಮಾಣ ಆಗುತ್ತಲೆ ಇರುತ್ತವೆ. ಹರ್ಷಲ್ ಗಿಬ್ಸ್ ಮತ್ತು ಯುವರಾಜ್ ಸಿಂಗ್ ಸಾಲಿಗೆ ಮತ್ತೊಬ್ಬ ಬ್ಯಾಟ್ಸಮನ್ ಸೇರ್ಪಡೆಯಾಗಿದ್ದಾರೆ. ಓವರ್ ನ 6 ಚೆಂಡುಗಳನ್ನು ಮೈದಾನದಿಂದ ಹೊರಗೆ ಅಟ್ಟಿದ್ದಾರೆ. ಹಾಗಾದರೆ ಆ ದಾಂಡಿಗ ಯಾರು? ಯಾವ ದೇಶದವರು?
ದುಬೈ[ಅ.14] ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ನಲ್ಲಿ ದಾಖಲೆ ನಿರ್ಮಾಣವಾಗಿದೆ. ಹಜರತ್ ಉಲ್ಲಾ ಝಾಜೈ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.
ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬಾಲ್ಕ್ ಲೆಜೆಂಡ್ಸ್ ವಿರುದ್ಧ ಕಾಬೂಲ್ ಜವಾನ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಝಾಜೈ ನಾಲ್ಕನೇ ಓವರ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಬ್ದುಲ್ಲಾ ಮಜಾರಿ ಆರು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್.
ಬಾಲ್ಕ್ ಲೆಜೆಂಡ್ಸ್ ನೀಡಿದ 225 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಕಾಬೂಲ್ಪರ ಝಾಜೈ ಆರಂಭದಿಂದಲೇ ಸವಾರಿ ಮಾಡಿದರು. ಎರಡನೇ ಓವರ್ನಲ್ಲಿ 20 ರನ್ ಸಿಡಿಸಿದ ಅವರು ನಾಲ್ಕನೇ ಓವರ್ನಲ್ಲಿ 6 ಎಸೆತಗಳನ್ನು ಸಿಕ್ಸರ್ಗಟ್ಟಿದರು. ಇದರ ಜೊತೆಗೆ ಒಂದು ವೈಡ್ ಕೂಡ ಸೇರಿ ಆ ಓವರ್ ನಲ್ಲಿ 37 ರನ್ ದಾಖಲಾದವು.
ಈ ಹಿಂದೆ ಏಕದಿನ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಭಾರತದ ಯುವರಾಜ್ ಸಿಂಗ್ ಟಿ20 ವಿಶ್ವಕಪ್ನಲ್ಲಿ, ಸೋಬರ್ಸ್ ಹಾಗೂ ರವಿಶಾಸ್ತ್ರಿ ಟೆಸ್ಟ್ ಕ್ರಿಕೆಟ್ನಲ್ಲಿ, ಅಲೆಕ್ಸ್ ಹೇಲ್ಸ್ ಹಾಗೂ ರಾಸ್ ವೈಟ್ಲೆ ನಾಟ್ವೆಸ್ಟ್ ಟಿ20 ಕ್ರಿಕೆಟ್ನಲ್ಲಿ, ಪೊಲಾರ್ಡ್ ಬಿಗ್ಬ್ಯಾಸ್ ಅಭ್ಯಾಸ ಪಂದ್ಯದಲ್ಲಿ, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ಕ್ಲಬ್ ಕ್ರಿಕೆಟ್ನಲ್ಲಿ 6 ಬಾಲಿಗೆ ಆರು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದವರಾಗಿದ್ದು ಅವರ ಸಾಲಿಗೆ ಝಾಜೈಸೇರ್ಪಡೆಯಾದರು.
