ನಾಯಕ ಫೈಜ್ ಫೈಜಲ್'ರನ್ನು ಮೊದಲ ಓವರ್'ನ ಎರಡನೇ ಎಸೆತದಲ್ಲೇ ಎಲ್'ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಇದಾದ ಕೆಲಹೊತ್ತಿನಲ್ಲಿ ಬಿನ್ನಿ ಮತ್ತೊರ್ವ ಆರಂಭಿಕ ಬ್ಯಾಟ್ಸ್'ಮನ್ ರಾಮಸ್ವಾಮಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆಗ ವಿದರ್ಭ ತಂಡದ ಮೊತ್ತ 36/2.

ಕೋಲ್ಕತ(ಡಿ.19): ರಣಜಿ ಫೈನಲ್ ಪ್ರವೇಶಿಸಲು ದಿಟ್ಟ ಹೆಜ್ಜೆ ಇಟ್ಟಿರುವ ಕರ್ನಾಟಕ ಇಂದೂ ಸಹಾ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಕರ್ನಾಟಕದ ಗೆಲುವಿನ ನಾಗಾಲೋಟಕ್ಕೆ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ಗಣೇಶ್ ಸತೀಶ್ ಅಡ್ಡಿಯಾಗಿ ಪರಿಣಮಿಸಿದ್ದಾರೆ

ಈಡನ್'ಗಾರ್ಡನ್ ಮೈದಾನದಲ್ಲಿ ವಿದರ್ಭ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೂರನೇ ದಿನ ಕೂಡಾ ಕರ್ನಾಟಕದ ಪ್ರಾಬಲ್ಯ ಮುಂದುವರೆದಿದೆ. ವಿದರ್ಭ ತಂಡ ಮೂರನೇ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದ್ದು ಕೇವಲ 79 ರನ್'ಗಳ ಮುನ್ನಡೆ ಸಾಧಿಸಿದೆ. ವಿದರ್ಭ ಪರ ಕನ್ನಡಿಗ ಗಣೇಶ್ ಶತೀಶ್ 71 ರನ್ ಬಾರಿಸಿದ್ದು, ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ವಿನೋದ್ ವಾಡ್'ಕರ್(19*) ಸಾಥ್ ನೀಡಿದ್ದಾರೆ.

ಆರಂಭದಲ್ಲೇ ಕರ್ನಾಟಕವನ್ನು ಆಲೌಟ್ ಮಾಡಿದ ವಿದರ್ಭಕ್ಕೆ ನಾಯಕ ವಿನಯ್ ಕುಮಾರ್ ಮೊದಲ ಓವರ್'ನಲ್ಲೇ ಶಾಕ್ ನೀಡಿದರು. ನಾಯಕ ಫೈಜ್ ಫೈಜಲ್'ರನ್ನು ಮೊದಲ ಓವರ್'ನ ಎರಡನೇ ಎಸೆತದಲ್ಲೇ ಎಲ್'ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಇದಾದ ಕೆಲಹೊತ್ತಿನಲ್ಲಿ ಬಿನ್ನಿ ಮತ್ತೊರ್ವ ಆರಂಭಿಕ ಬ್ಯಾಟ್ಸ್'ಮನ್ ರಾಮಸ್ವಾಮಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆಗ ವಿದರ್ಭ ತಂಡದ ಮೊತ್ತ 36/2. ಈ ಬಳಿಕ ಜತೆಯಾದ ಗಣೇಶ್ ಸತೀಶ್ ಹಾಗೂ ವಾಸೀಂ ಜಾಫರ್ ತಂಡಕ್ಕೆ ಅಲ್ಪ ಚೇತರಿಕೆ ನೀಡಲು ಮುಂದಾದರು. ಆದರೆ ಜಾಫರ್ ಹೆಚ್ಚುಹೊತ್ತು ಕ್ರೀಸ್'ನಲ್ಲಿ ನೆಲೆಯೂರಲು ಎಡಗೈವೇಗಿ ಎಸ್. ಅರವಿಂದ್ ಅವಕಾಶ ನೀಡಲಿಲ್ಲ. ವಾಸೀಂ ಜಾಫರ್(33) ಎಲ್'ಬಿ ಬಲೆಗೆ ಬಿದ್ದರು. ನಂತರ 4ನೇ ವಿಕೆಟ್'ಗೆ ಶತೀಶ್ ಹಾಗೂ ಅಪೂರ್ವ್ ವಾಂಖಡೆ ಅರ್ಧಶತಕದ ಜತೆಯಾಟವಾಡುವ ಮೂಲಕ ವಿದರ್ಭ ತಂಡಕ್ಕೆ ಆಸರೆಯಾದರು. ಏಕದಿನ ಕ್ರಿಕೆಟ್ ಮಾದರಿಯಂತೆ ಬ್ಯಾಟ್'ಬೀಸಿದ ವಾಂಖಡೆ ಕೇವಲ 48 ಎಸೆತಗಳಲ್ಲಿ 49 ರನ್ ಬಾರಿಸಿ ಅರವಿಂದ್'ಗೆ ಎರಡನೇ ಬಲಿಯಾದರು. ಮತ್ತೊಂದೆಡೆ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿರುವ ಗಣೇಶ್ ಸತೀಶ್ 71 ರನ್ ಬಾರಿಸಿದ್ದು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ಕರ್ನಾಟಕ ಪರ ಅರವಿಂದ್ 2 ವಿಕೆಟ್ ಪಡೆದರೆ, ವಿನಯ್ ಕುಮಾರ್, ಬಿನ್ನಿ ತಲಾ 1 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಕರ್ನಾಟಕ ತಂಡವನ್ನು 301 ರನ್'ಗಳಿಗೆ ಆಲೌಟ್ ಮಾಡುವಲ್ಲಿ ವಿದರ್ಭ ಸಫಲವಾಯಿತು. ಮೊದಲ ಇನಿಂಗ್ಸ್'ನಲ್ಲಿ ಕರ್ನಾಟಕ 116 ರನ್'ಗಳ ಮುನ್ನಡೆ ಪಡೆಯಿತು. ಎರಡು ವಿಕೆಟ್'ಗಳನ್ನು ಮೊಹಮ್ಮದ್ ಶಮಿ ಪಡೆಯುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ವಿದರ್ಭ ಮೊದಲ ಇನಿಂಗ್ಸ್: 185/10

ವಿದರ್ಭ ಎರಡನೇ ಇನಿಂಗ್ಸ್: 195/4

ಗಣೇಶ್ ಸತೀಶ್: 71*

ಅರವಿಂದ್: 41/2

ಕರ್ನಾಟಕ: 301/10

ಕರುಣ್ ನಾಯರ್: 153

ಗುರ್ಬಾನಿ: 94/5

(*ಮೂರನೇ ದಿನದಂತ್ಯಕ್ಕೆ)