ಫ್ರೆಂಚ್ ಓಪನ್: ಹೊರಬಿದ್ದ ವೀನಸ್..!
ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂ ಮೊದಲ ದಿನವೇ ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. 9ನೇ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ವೀನಸ್ ವಿಲಿಯಮ್ಸ್ ಮೊದಲ ಸುತ್ತಲ್ಲೇ ಹೊರಬಿದ್ದಿದ್ದಾರೆ. ಭಾನುವಾರ ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ವಾಂಗ್ ಕಿಯಾಂಗ್ ವಿರುದ್ಧ 4-6, 5-7 ನೇರ ಸೆಟ್‌ಗಳಲ್ಲಿ ವೀನಸ್ ಸೋಲುಂಡರು.
ಪ್ಯಾರಿಸ್(ಮೇ.28): ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಂ ಮೊದಲ ದಿನವೇ ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. 9ನೇ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ವೀನಸ್ ವಿಲಿಯಮ್ಸ್ ಮೊದಲ ಸುತ್ತಲ್ಲೇ ಹೊರಬಿದ್ದಿದ್ದಾರೆ. ಭಾನುವಾರ ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ವಾಂಗ್ ಕಿಯಾಂಗ್ ವಿರುದ್ಧ 4-6, 5-7 ನೇರ ಸೆಟ್‌ಗಳಲ್ಲಿ ವೀನಸ್ ಸೋಲುಂಡರು.
ಇದೇ ವೇಳೆ 4ನೇ ಶ್ರೇಯಾಂಕಿತ ಆಟಗಾರ್ತಿ ಉಕ್ರೇನ್‌ನ ಎಲೆನಾ ಸ್ವಿಟೊಲಿನಾ ಆಸ್ಟ್ರೇಲಿಯಾದ ಅಜ್ಲಾ ಟಾಮೊನೊವಿಚ್ ವಿರುದ್ಧ 7-5, 6-3 ನೇರ ಸೆಟ್ ಗಳಲ್ಲಿ ಗೆದ್ದು 2ನೇ ಸುತ್ತು ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಸ್ಟಿಟೊಲಿನಾ 2010ರ ಚಾಂಪಿಯನ್ ಫ್ರಾನ್ಸೆಸಾ ಶಿಯವೊನೆ ಇಲ್ಲವೇ ಸ್ಲೊವಾಕಿಯಾದ ವಿಕ್ಟೊರಿಯಾ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ 4ನೇ ಶ್ರೇಯಾಂಕಿತ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊಮ್ 2ನೇ ಸುತ್ತಿಗೇರಿದರು. ಮೊದಲ ಸುತ್ತಿನಲ್ಲಿ ವಿಶ್ವ ನಂ.182 ಈಜಿಪ್ಟ್‌ನ ಮೊಹಮದ್ ಸಫಾವತ್ ವಿರುದ್ಧ 6-1, 6-4, 7-6 ನೇರ ಸೆಟ್‌ಗಳಲ್ಲಿ ಜಯಗಳಿಸಿದರು. ರಾಫೆಲ್ ನಡಾಲ್, ಸೆರೆನಾ ವಿಲಿಯಮ್ಸ್, ನೋವಾಕ್ ಜೋಕೋವಿಚ್ ಇಂದು ತಮ್ಮ ಅಭಿಯಾನ ಆರಂಭಿಸಲಿದ್ದಾರೆ.