ಸದ್ಯಕ್ಕೆ ಕ್ಯಾಪ್ಟನ್ ಧೋನಿ ಒತ್ತಡದಲ್ಲಿದ್ದಾರೆ. ಒಂದು ಕಡೆ ಸರಣಿ ಗೆಲ್ಲಬೇಕು. ಮತ್ತೊಂದು ಕಡೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಬೇಕು. ತನ್ನ ಅದೃಷ್ಟದ ಮೈದಾನ ಇಂದು ಮಹಿಯ ಅದೃಷ್ಟವನ್ನ ಬದಲಿಸುತ್ತಾ ಅನ್ನೋದು ಸದ್ಯಕ್ಕಿರುವ ಕುತೂಹಲ. 

ಧೋನಿಯ ಲಕ್ ಬದಲಿಸಿದ ಮೈದಾನ
ಯಾರು ಏನೇ ಹೇಳಲಿ, ಎಂಎಸ್ ಧೋನಿ ಮಾತ್ರ ಸಂಕಷ್ಟದಲ್ಲಿದ್ದಾರೆ. ಕೇವಲ ನಾಯಕನಾಗಿ ಮಾತ್ರವಲ್ಲ. ಒಬ್ಬ ಆಟಗಾರನಾಗಿಯೂ ಅವರು ಒತ್ತಡಲ್ಲಿದ್ದಾರೆ. ಒಂದು ಕಡೆ ತವರಿನಲ್ಲಿ ಸರಣಿ ಕೈಚೆಲ್ಲುವ ಭಯವಿದೆ. ಮತ್ತೊಂದು ಕಡೆ ರನ್ ಗಳಿಸಲು ಮಹಿ ಪರದಾಡುತ್ತಿದ್ದಾರೆ. ಕೀಪಿಂಗ್​ನಲ್ಲಿ ಸೈ ಎನಿಸಿಕೊಂಡ್ರೂ, 4ನೇ ಪಂದ್ಯದಲ್ಲಿ ಧೋನಿ ರನ್​​ಗಳಿಸಲು ಪರದಾಡಿದ್ದು ಎಲ್ಲರಲ್ಲೂ ಆಘಾತಗೊಳಿಸಿದೆ. ಈಗ ಮಹಿಯ ಅದೃಷ್ಟದ ಮೈದಾನ ಮತ್ತೆ ಅವರ ಅದೃಷ್ಟ ಬದಲಿಸಬೇಕಿದೆ.

ವೈಜಾಕ್​ನಲ್ಲಿ ಧೋನಿ ಮೊದಲ ಶತಕ
ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊದಲ 4 ಪಂದ್ಯಗಳಲ್ಲೂ ಧೋನಿ ವಿಫಲರಾಗಿದ್ದರು. ವೈಜಾಕ್​ನಲ್ಲಿ ನಡೆದ 5ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡ್ತೀನಿ ಎಂಬ ವಿಶ್ವಾಸವೂ ಮಹಿಗೆ ಇರಲಿಲ್ಲ. ಅದನ್ನ ಅವರ ಜೀವನಾಧಾರಿತ ಚಿತ್ರದಲ್ಲೂ ಹೇಳಿಕೊಂಡಿದ್ದಾರೆ. ಆದರೆ ಆಗಿನ ನಾಯಕ ಸೌರವ್ ಗಂಗೂಲಿ, ಆಡಲು ಚಾನ್ಸ್ ಕೊಟ್ಟಿದ್ದಲ್ಲದೆ ಧೋನಿಯನ್ನ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಆಗ ಚೇಂಜ್ ಆಯ್ತು ನೋಡಿ ಮಹಿ ಲಕ್.

ಬದ್ಧವೈರಿಗಳ ಸದೆಬಡಿದ ಧೋನಿ
ಸಿಕ್ಕಿದ್ದೆ ಚಾನ್ಸ್ ಅನ್ನೋ ಹಾಗೆ ಫಸ್ಟ್ ಡೌನ್​ನಲ್ಲಿ ಬ್ಯಾಟಿಂಗ್​ಗೆ ಬಂದ ಧೋನಿ, ಬದ್ಧವೈರಿ ಪಾಕಿಸ್ತಾನ ಬೌಲರ್​ಗಳ ಮನಬಂದಂತೆ ದಂಡಿಸಿದ್ರು. ಅದು ಯಾವ ಮಟ್ಟಕ್ಕೆ ಅಂದ್ರೆ ಪಾಕಿಗಳಿಂದ ಮಹಿಯನ್ನ ಕಂಟ್ರೋಲ್ ಮಾಡಲು ಸಾಧ್ಯವೇ ಆಗಲಿಲ್ಲ. ಧೋನಿ ಬೌಂಡ್ರಿ-ಸಿಕ್ಸ್​ಗಳ ಆರ್ಭಟ ನೋಡಿ, ಭಾರತೀಯ ಕ್ರಿಕೆಟ್​ ಅಭಿಮಾನಿಗಳಂತೂ ಭಾರತಕ್ಕೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್​ಮನ್ ಸಿಕ್ಕಿದ ಎಂದು ಸಂಭ್ರಮಿಸಿದ್ರು. 

ಅಂದು ಧೋನಿ 123 ಬಾಲ್​ನಲ್ಲಿ 15 ಬೌಂಡರಿ, 4 ಸಿಕ್ಸ್​ ಸಹಿತ 148 ರನ್ ಬಾರಿಸಿದ್ರು. ಮೊದಲ 4 ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಆಡಿದ್ದ ಮಹಿ, 3ನೇ ಕ್ರಮಾಂಕದಲ್ಲಿ ಮಿಂಚಿದ್ರು. ಅಲ್ಲಿಂದ ಸೀಮಿತ ಓವರ್​ಗಳ ಪಂದ್ಯದಲ್ಲಿ ಧೋನಿ ಸ್ಥಾನ ಕನ್ಫರ್ಮ್​ ಆಯ್ತು.

ಇಂದು ಸಿಡಿಯುತ್ತಾರಾ ಧೋನಿ..?
ಅದೃಷ್ಟದ ಮೈದಾನದಲ್ಲಿ ಮಹಿ ಇಂದು ಸಿಡಿಯಲೇಬೇಕಿದೆ. ಸರಣಿ ಕೈಚಲ್ಲಿದ್ರೆ ನಾಯಕತ್ವ ಪಟ್ಟ ಅಲುಗಾಡಲಿದೆ. ವೈಯಕ್ತಿಕವಾಗಿಯೂ ಮಿಂಚಬೇಕಿದೆ. ಇದರಿಂದ ಧೋನಿಗೆ ಇಂದು ಮಹತ್ವದ ಪಂದ್ಯ.