ಅಥ್ಲೇಟಿಕ್ಸ್ ದಂತಕಥೆ ಉಸೇನ್‌ ಬೋಲ್ಟ್‌ಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಬೋಲ್ಟ್ ಆಯೋಜಿಸಿದ್ದ ಬರ್ತ್‌ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಕ್ರಿಸ್‌ ಗೇಲ್‌ಗೂ ಸೋಂಕಿನ ಭೀತಿ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಜಮೈಕಾ(ಆ.25): ವಿಶ್ವದ ವೇಗದ ಓಟಗಾರ ಉಸೇನ್‌ ಬೋಲ್ಟ್‌ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಲ್ಟ್‌ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 

ತಮ್ಮ 34ನೇ ಜನ್ಮದಿನಾಚರಣೆ ನಿಮಿತ್ತ ಜಮೈಕಾದಲ್ಲಿ ಭಾನುವಾರ ಆಯೋಜಿಸಿದ್ದ ಪಾರ್ಟಿಯಲ್ಲಿ ಉಸೇನ್‌ ಬೋಲ್ಟ್‌ ಪಾಲ್ಗೊಂಡಿದ್ದರು. ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಕ್ರಿಸ್‌ ಗೇಲ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೂಡ ಪಾಲ್ಗೊಂಡಿದ್ದರು. ಪಾರ್ಟಿ ನಡೆದ ಮರುದಿನವೇ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, ಬೋಲ್ಟ್‌ಗೆ ಸೋಂಕು ಇರುವುದು ದೃಢಪಟ್ಟಿದೆ.

IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್‌ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !

ಗೇಲ್‌ಗೆ ಕೊರೋನಾ ಭೀತಿ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಬೋಲ್ಟ್ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದು, ಅವರಿಗೂ ಸೋಂಕಿನ ಭೀತಿ ಎದುರಾಗಿದೆ. ಇನ್ನು ಕೆಲವೇ ದಿನಗಳಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ತಂಡದ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. 30 ಲಕ್ಷ ಜನಸಂಖ್ಯೆ ದ್ವೀಪವಾದ ಜಮೈಕಾದಲ್ಲಿ ಇದುವರೆಗೂ 1413 ಕೋವಿಡ್ 19 ಸೋಂಕಿತರಿರುವುದು ಪತ್ತೆಯಾಗಿದ್ದು, 16 ಮಂದಿ ಸಾವಿಗೀಡಾಗಿದ್ದಾರೆ. 

ಭಾರತದಲ್ಲಿ ನಡೆಯಬೇಕಿದ್ದ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೂ ಅಬುದಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಪಂದ್ಯಾಟಗಳು ನಡೆಯಲಿವೆ.