ವಿಶ್ವದ ವೇಗದ ಮಾನವ ಜಮೈಕಾದ ಉಸೇನ್ ಬೋಲ್ಟ್ ತಮ್ಮ ವೃತ್ತಿಜೀವನದ ಕೊನೆ ಓಟಕ್ಕೆ ಸಜ್ಜಾಗಿದ್ದಾರೆ. ಇಂದಿನಿಂದ ಇಲ್ಲಿ ಆರಂಭಗೊಳ್ಳುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100೦ ಮೀಟರ್ ಹಾಗೂ 4/100 ಮೀ. ರಿಲೇ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿರುವ ಬೋಲ್ಟ್, ಚಿನ್ನದ ಪದಕದೊಂದಿಗೆ ವೃತ್ತಿ ಬದುಕಿಗೆ ವಿದಾಯ ಹೇಳಲು ಎದುರು ನೋಡುತ್ತಿದ್ದಾರೆ. ಆ.5ರಂದು 100 ಮೀ. ಹೀಟ್ಸ್ ನಡೆಯಲಿದ್ದರೆ, ಆ.6ಕ್ಕೆ ಸೆಮೀಸ್ ಹಾಗೂ ಫೈನಲ್ ನಡೆಯಲಿದೆ.

ಲಂಡನ್(ಆ.04): ವಿಶ್ವದ ವೇಗದ ಮಾನವ ಜಮೈಕಾದ ಉಸೇನ್ ಬೋಲ್ಟ್ ತಮ್ಮ ವೃತ್ತಿಜೀವನದ ಕೊನೆ ಓಟಕ್ಕೆ ಸಜ್ಜಾಗಿದ್ದಾರೆ. ಇಂದಿನಿಂದ ಇಲ್ಲಿ ಆರಂಭಗೊಳ್ಳುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100೦ ಮೀಟರ್ ಹಾಗೂ 4/100 ಮೀ. ರಿಲೇ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿರುವ ಬೋಲ್ಟ್, ಚಿನ್ನದ ಪದಕದೊಂದಿಗೆ ವೃತ್ತಿ ಬದುಕಿಗೆ ವಿದಾಯ ಹೇಳಲು ಎದುರು ನೋಡುತ್ತಿದ್ದಾರೆ. ಆ.5ರಂದು 100 ಮೀ. ಹೀಟ್ಸ್ ನಡೆಯಲಿದ್ದರೆ, ಆ.6ಕ್ಕೆ ಸೆಮೀಸ್ ಹಾಗೂ ಫೈನಲ್ ನಡೆಯಲಿದೆ.

ಪ್ರತಿ ಬಾರಿಯೂ ಬೋಲ್ಟ್ ತಮ್ಮ ಸಮಯವನ್ನು ಉತ್ತಮಗೊಳಿಸಿಕೊಳ್ಳುತ್ತಾ ವಿಶ್ವ ಚಾಂಪಿಯನ್‌ಶಿಪ್‌ಗೆ ಕಾಲಿಟ್ಟಿದ್ದಾರೆ. ಈ ವರ್ಷ ಅವರ ಶ್ರೇಷ್ಠ ಸಮಯ 9.95 ಸೆಕೆಂಡ್‌'ಗಳು. 2009ರ ಬರ್ಲಿನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 9.58 ಸೆಕೆಂಡ್‌ಗಳಲ್ಲಿ 100 ಮೀ ಓಟ ಮುಕ್ತಾಯಗೊಳಿಸಿದ್ದ ಬೋಲ್ಟ್ ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆ ಇಂದಿಗೂ ಹಾಗೇ ಉಳಿದಿದೆ.

ಈ ವರೆಗೂ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಶಿಪ್ 100 ಮೀ.ನಲ್ಲಿ 6 ಚಿನ್ನದ ಪದಕ ಗೆದ್ದಿರುವ ಬೋಲ್ಟ್, ತಮ್ಮ ವೃತ್ತಿಬದುಕಿನಲ್ಲಿ 49 ಬಾರಿ 100 ಮೀ. ಓಟವನ್ನು 10 ಸೆಕೆಂಡ್‌ಗಿಂತ ಕಡಿಮೆ ಸಮಯದಲ್ಲಿ ಮುಕ್ತಾಯಗೊಳಿಸಿ ದಾಖಲೆ ಬರೆದಿದ್ದಾರೆ.

ಅಗ್ರ 30 ಅತಿವೇಗದ 100 ಮೀಟರ್ ಓಟದ ಪಟ್ಟಿಯಲ್ಲಿ ಬೋಲ್ಟ್ ಹೆಸರು 9 ಬಾರಿ ದಾಖಲಾಗಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿರುವ ಅಗ್ರ ಅಥ್ಲೀಟ್‌ಗಳ ಪೈಕಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತೀರ್ಣರಾಗದ ಏಕೈಕ ಅಥ್ಲೀಟ್ ಬೋಲ್ಟ್.

ನಿಕಟ ಪ್ರತಿಸ್ಪರ್ಧಿಗೆ ಗಾಯ:

ಬೋಲ್ಟ್‌ಗೆ ತಮ್ಮ ಕೊನೆ ರೇಸ್ ನಲ್ಲಿ ಕೆನಡಾದ ಆ್ಯಂಡ್ರೆ ಡಿ ಗ್ರಾಸ್ ಅವರಿಂದ ಭಾರೀ ಪೈಪೋಟಿ ಎದುರಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಡಿ ಗ್ರಾಸ್ ಸ್ನಾಯು ಸೆಳೆತದ ಕಾರಣ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ, ಬೋಲ್ಟ್‌ಗೆ ಚಿನ್ನ ಗೆಲ್ಲಲು ಸುಲಭವಾಗಲಿದೆ ಎಂಬ ಚರ್ಚೆ ಆರಂಭವಾಗಿದೆ.

ಮೊಫರಾಗೂ ಕೊನೆ ಸ್ಪರ್ಧೆ:

ಬ್ರಿಟನ್‌ನ ಮೊಫರ ಕೂಡ ಈ ಕ್ರೀಡಾಕೂಟದ ಬಳಿಕ ವಿದಾಯ ಹೇಳಲಿದ್ದಾರೆ. 2012, 2016ರ ಒಲಿಂಪಿಕ್ಸ್ 5000 ಮೀ ಹಾಗೂ 10000 ಮೀ. ಓಟದಲ್ಲಿ ಚಿನ್ನ ಪದಕ ಗೆದ್ದಿದ್ದ ಫರಾ, ಬ್ರಿಟನ್‌ನ ಸಾರ್ವ ಕಾಲಿಕ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.