US ಓಪನ್ 2019: ಕ್ವಾರ್ಟರ್‌ಗೆ ನಡಾಲ್ ಲಗ್ಗೆ
ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಫೇನ್ ಟೆನಿಸ್ ಆಟಗಾರ ರಾಫೆಲ್ ನಡಾಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆದರೆ ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕಿತೆ ಜಪಾನ್‌ನ ನವೊಮಿ ಒಸಾಕ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನ್ಯೂಯಾರ್ಕ್(ಸೆ.04): ಯುಎಸ್ ಓಪನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿ ರೋಚಕ ಘಟ್ಟ ತಲುಪಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಹಾಗೂ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸೋಮವಾರ ರಾತ್ರಿ ನಡೆದ 4ನೇ ಸುತ್ತಿನ ಪಂದ್ಯದಲ್ಲಿ ನಡಾಲ್, 2014ರ ಚಾಂಪಿಯನ್ ಕ್ರೊವೇಶಿಯಾದ ಮರಿನ್ ಸಿಲಿಚ್ ವಿರುದ್ಧ 6-3, 3-6, 6-1, 6-2 ಸೆಟ್‌ಗಳಿಂದ ಗೆದ್ದರು. ನಡಾಲ್‌ಗೆ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾದ ಡೀಗೋ ಶ್ವಾಟ್ಸ್‌ಮ್ಯಾನ್ ಎದುರಾಗಲಿದ್ದಾರೆ. 4ನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಡೇವಿಡ್ ಗಾಫಿನ್ ವಿರುದ್ಧ ಗೆದ್ದ ಫೆಡರರ್, ಅಂತಿಮ 8ರ ಸುತ್ತಿನಲ್ಲಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ವಿರುದ್ಧ ಸೆಣಸಲಿದ್ದಾರೆ.
ಟೆನಿಸ್ ದಿಗ್ಗಜ ಫೆಡರರ್ ಹೃದಯ ನಿಲ್ಲಿಸಿದ್ದ ಭಾರತದ ನಗಾಲ್!
ಸ್ವಿಜರ್‌ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ 4ನೇ ಸುತ್ತಿನ ಪಂದ್ಯದ ವೇಳೆ ಗಾಯಗೊಂಡ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಚ್, ನಿವೃತ್ತಿ ಪಡೆದು ಟೂರ್ನಿಯಿಂದ ಹೊರನಡೆದರು.
ಒಸಾಕಗೆ ಆಘಾತ: ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕಿತೆ ಜಪಾನ್‌ನ ನವೊಮಿ ಒಸಾಕ, ಮಹಿಳಾ ಸಿಂಗಲ್ಸ್ 4ನೇ ಸುತ್ತಿನ ಪಂದ್ಯದಲ್ಲಿ ಸ್ವಿಜರ್‌ಲೆಂಡ್‌ನ ಬೆಲಿಂಡಾ ಬೆನ್ಚಿಚ್ ವಿರುದ್ಧ 5-7, 4-6 ಸೆಟ್‌ಗಳಲ್ಲಿ ಅಚ್ಚರಿಯ ಸೋಲು ಕಂಡರು. ಮಾಜಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ.
ಇದೇ ವೇಳೆ ಪುರುಷರ ಡಬಲ್ಸ್ 3ನೇ ಸುತ್ತಿನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಡೆನಿಸ್ ಶಾಪೊವಲೊವ್ ಜೋಡಿ ಸೋಲುಂಡು ಹೊರಬಿತ್ತು. ಮಿಶ್ರ ಡಬಲ್ಸ್ ವಿಭಾಗದಲ್ಲೂ ಬೋಪಣ್ಣಗೆ ನಿರಾಸೆ ಉಂಟಾಯಿತು. ಬೋಪಣ್ಣ ಹಾಗೂ ಅಮೆರಿಕದ ಅಬಿಗೈಲ್ ಸ್ಪೇರ್ಸ್ ಜೋಡಿ ಅಂತಿಮ 16ರ ಸುತ್ತಿನಲ್ಲಿ ಸೋಲುಂಡಿತು.