ನ್ಯೂಯಾರ್ಕ್(ಸೆ.03) : 5 ಬಾರಿ ಚಾಂಪಿಯನ್ ಸ್ವಿಜರ್‌ಲೆಂಡ್‌ನ ತಾರಾ ಟೆನಿಸಿಗ ರೋಜರ್ ಫೆಡರರ್, ನೊವಾಕ್ ಜೋಕೋವಿಚ್ ಮತ್ತು ಮರಿಯಾ ಶರಪೋವಾ ಇಲ್ಲಿ ನಡೆಯುತ್ತಿರುವ ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್‌ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಿ ಕ್ವಾರ್ಟರ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.  ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೆವ್, ಆ್ಯಂಜೆಲಿಕ್ ಕೆರ್ಬರ್ ಸೋತು ಹೊರಬಿದ್ದಿದ್ದಾರೆ. ಫೆಡರರ್, ಆಸ್ಟ್ರೇಲಿಯಾದ ನಿಕ್ ಕಿರ್ಗಿಸ್ ವಿರುದ್ಧ6-4, 6-1, 7-5 ಸೆಟ್‌ಗಳಲ್ಲಿ ಜಯ ಪಡೆದರು. ಮೊದಲ 2 ಸೆಟ್‌ಗಳಲ್ಲಿ ಫೆಡರರ್‌ಗೆ, ಆಸ್ಟ್ರೇಲಿಯಾ ಆಟಗಾರ ಅಷ್ಟ್ರೇನು ಪ್ರತಿರೋಧ ತೋರಲಿಲ್ಲ. 

ಆದರೆ 3ನೇ ಸೆಟ್‌ನಲ್ಲಿ ಉತ್ತಮ ಹೋರಾಟ ಕಂಡು ಬಂತು. ಆದರೂ ಫೆಡರರ್ ಮುನ್ನಡೆ ಸಾಧಿಸಿ ಪಂದ್ಯ ಗೆದ್ದರು. ಯುಎಸ್ ಓಪನ್‌ನ 13ನೇ ಕ್ವಾರ್ಟರ್‌ಗೇರುವ ಉತ್ಸಾಹ ದಲ್ಲಿರುವ ಫೆಡರರ್, ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾನ್ ಮಿಲ್ಮನ್ ರನ್ನು ಎದುರಿ ಸಲಿದ್ದಾರೆ.  ಒಂದೊಮ್ಮೆ ಫೆಡರರ್ ಕ್ವಾರ್ಟರ್ ಗೇರಿದರೆ, ಜೋಕೋವಿಚ್ ಸವಾಲನ್ನು ಎದುರಿಸಲಿದ್ದಾರೆ. 2011, 2015ರಲ್ಲಿ ಯುಎಸ್ ಚಾಂಪಿಯನ್ ಸರ್ಬಿಯಾದ ನೊವಾಕ್ ಜೋಕೋವಿಚ್, 3ನೇ ಟ್ರೋಫಿ ಮೇಲೆ ಕಣ್ಣಿರಿಸಿದ್ದಾರೆ. 3ನೇ ಸುತ್ತಿನಲ್ಲಿ ಜೋಕೋವಿಚ್ 6-2, 6-3, 6-3 ಸೆಟ್‌ಗಳಲ್ಲಿ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ಎದುರು ಗೆಲುವು ಪಡೆದರು. 

ಜೋಕೋವಿಚ್, ಪ್ರಿ ಕ್ವಾರ್ಟರ್‌ನಲ್ಲಿ ಪೋರ್ಚುಗಲ್‌ನ ಜೊವ್ ಸೌಸಾ ಎದುರು ಸೆಣಸಲಿದ್ದಾರೆ. 21 ವರ್ಷದ ಯುವ ಟೆನಿಸಿಗ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ 7-6, 4-6, 1-6, 3-6 ಸೆಟ್‌ಗಳಲ್ಲಿ ತಮ್ಮದೇ ದೇಶದ ಫಿಲಿಪ್ಪೆ ಕೊಹ್ಲಸ್ಚೆರಿಬರ್ ವಿರುದ್ಧ ಸೋತರು.

ಶರಪೋವಾಗೆ ಜಯ: ಮಾಜಿ ಚಾಂಪಿಯನ್ ರಷ್ಯಾದ ಮರಿಯಾ ಶರಪೋವಾ, ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಪ್ರಿ ಕ್ವಾರ್ಟರ್ ಹಂತಕ್ಕೇರಿದ್ದಾರೆ. 3ನೇ ಸುತ್ತಿನಲ್ಲಿ ಶರಪೋವಾ, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೋ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2006ರ ಯುಎಸ್ ಓಪನ್ ಚಾಂಪಿಯನ್ ಶರಪೋವಾ, ಒಸ್ಟಾಪೆಂಕೋ ವಿರುದ್ಧ ಸುಲಭ ಜಯ ಪಡೆದರು. 

3ನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ 2016ರ ಯುಎಸ್ ಚಾಂಪಿಯನ್ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್, ಸ್ಲೋವಾಕಿ ಯಾದ ಡೊಮಿನಿಕಾ ಸಿಬುಲ್ಕುವಾ ಎದುರು 6-3, 3-6, 3-6 ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಮೊದಲ ಸೆಟ್ ಗೆದ್ದ ಕೆರ್ಬರ್, ಉಳಿದ 2 ಸೆಟ್‌ಗಳಲ್ಲಿ ಸೋತರು. 

ದಿವಿಜ್ ಜೋಡಿಗೆ ಸೋಲು: ಪುರುಷರ ಡಬಲ್ಸ್‌ನ 2ನೇ ಸುತ್ತಿನಲ್ಲಿ ಭಾರತದ ದಿವಿಜ್ ಶರಣ್ ಮತ್ತು ನ್ಯೂಜಿಲೆಂಡ್‌ನ ಆರ್ಟೆಮ್ ಸಿಟಕ್ ಜೋಡಿ ಪರಾಭವ ಹೊಂದುವ ಮೂಲಕ ಹೊರಬಿತ್ತು. ದಿವಿಜ್ ಜೋಡಿ 3-6, 6-3, 3-6 ಸೆಟ್‌ಗಳಲ್ಲಿ ಬ್ರೆಜಿಲ್‌ನ
ಮಾರ್ಸೆಲೊ ಮತ್ತು ಪೋಲೆಂಡ್‌ನ ಲುಕಾಸ್ ಕೊಬಟ್ ಜೋಡಿ ವಿರುದ್ಧ ಸೋಲು ಕಂಡಿತು.