ಮೈಸೂರು(ಫೆ.16): ಮಯಾಂಕ್‌ ಮರ್ಕಂಡೆ (5-31) ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ‘ಎ’ ತಂಡ, ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಹಾಗೂ 68 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ ಭಾರತ ‘ಎ’ 1-0ಯಿಂದ ಸರಣಿ ಜಯಿಸಿದೆ. 

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ-ಇಂದಿನಿಂದ ಟಿಕೆಟ್ ಮಾರಾಟ ಆರಂಭ!

ಫಾಲೋ ಆನ್‌ ಹೇರಿಸಿಕೊಂಡು 3ನೇ ದಿನವಾದ ಶುಕ್ರವಾರ ವಿಕೆಟ್‌ ನಷ್ಟವಿಲ್ಲದೇ 24 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಲಯನ್ಸ್‌ 180 ರನ್‌ಗಳಿಗೆ ಆಲೌಟ್‌ ಆಯಿತು. ಬೆನ್‌ ಡಕೆಟ್‌(50), ಲಿವೀಸ್‌ ಗ್ರೆಗೋರಿ (44) ರನ್‌ ಗಳಿಸಿದ್ದು ಹೊರತುಪಡಿಸಿದರೆ ಇನ್ನುಳಿದ ಆಟಗಾರರು ಹೋರಾಟ ಪ್ರದರ್ಶಿಸಲಿಲ್ಲ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ!

 ಭಾರತ ‘ಎ’ ಪರ ಮರ್ಕಂಡೆ 5, ಜಲಜ್‌ ಸಕ್ಸೇನಾ 2 ವಿಕೆಟ್‌ ಪಡೆದರು. ಲಯನ್ಸ್‌ ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್‌ ಗಳಿಸಿತ್ತು. ಭಾರತ ‘ಎ’ ಮೊದಲ ಇನ್ನಿಂಗ್ಸ್‌ನಲ್ಲಿ ಅಭಿಮನ್ಯು ಈಶ್ವರನ್‌ ಶತಕ, ರಾಹುಲ್‌ ಹಾಗೂ ಪಾಂಚಾಲ್‌ರ ಅರ್ಧಶತಕಗಳ ನೆರವಿನಿಂದ 392 ರನ್‌ ಗಳಿಸಿತ್ತು.

ಸ್ಕೋರ್‌: ಭಾರತ ‘ಎ’ 392/10, ಇಂಗ್ಲೆಂಡ್‌ ಲಯನ್ಸ್‌ 144/10 ಹಾಗೂ 180/10