ಬೆಂಗಳೂರು(ನ.01): ಭಾನುವಾರ ಮುಕ್ತಾಯ ಕಂಡ ನಾಲ್ಕನೇ ಏಷ್ಯಾ ಚಾಂಪಿಯನ್ಸ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ಗೆಲುವು ಸಾಧಿಸಲು ತಂಡದಲ್ಲಿನ ಐಕ್ಯತೆಯ ಪ್ರದರ್ಶನವೇ ಪ್ರಮುಖ ಕಾರಣ ಎಂದು ಡ್ರ್ಯಾಗ್‌ಫ್ಲಿಕರ್ ರೂಪೀಂದರ್ ಸಿಂಗ್ ಅಭಿಪ್ರಾಯಿಸಿದರು.

ಹಾಕಿ ಟೀಂ ಇಂಡಿಯಾ ಚಾಂಪಿಯನ್ ಆಗಲು ತಂಡದ ಪರ 11 ಗೋಲುಗಳನ್ನು ಬಾರಿಸಿ ಟೂರ್ನಿಯಲ್ಲಿ ತಂಡ ಅಜೇಯವಾಗುಳಿಯಲು ನೆರವಾದ ರೂಪೀಂದರ್ ಸೋಮವಾರ ತಡರಾತ್ರಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದರು.

‘‘ತಂಡದಲ್ಲಿನ ಕೆಲ ಯುವ ಆಟಗಾರರಿಗೆ ಈ ಪಂದ್ಯಾವಳಿ ಹೊಸ ಅನುಭವ ನೀಡಿತು. ಎಲ್ಲಕ್ಕಿಂತ ಮಿಗಿಲಾಗಿ ಕಿರಿಯರು ಹಾಗೂ ಹಿರಿಯರೆಂಬ ಭೇದವಿಲ್ಲದೆ ಐಕ್ಯತೆಯ ಆಟವಾಡಿದ್ದು ಈ ಅಪೂರ್ವ ಗೆಲುವಿಗೆ ಕಾರಣ’’ ಎಂದು ರೂಪೀಂದರ್ ಹೇಳಿದರು.