ಪುಣೆ ಪರ ಸಂಘಟಿತ ದಾಳಿ ನಡೆಸಿದ ಜಯದೇವ್ ಉನಾದ್ಕಟ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದು ಮಾತ್ರವಲ್ಲದೇ ಐಪಿಎಲ್'ನಲ್ಲಿ ಜೀವನ ಶ್ರೇಷ್ಟ(30/5) ಬೌಲಿಂಗ್ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು.
ಹೈದರಾಬಾದ್(ಮೇ.06): ಮಧ್ಯಮ ವೇಗಿ ಜಯದೇವ್ ಉನಾದ್ಕಟ್ ಮಾರಕ ದಾಳಿಗೆ ತತ್ತರಿಸಿದ ಸನ್'ರೈಸರ್ಸ್ ಹೈದರಾಬಾದ್ ತಂಡವು ರೈಸಿಂಗ್ ಪುಣೆ ಸೂಪರ್'ಜೈಂಟ್ ಎದುರು 12ರನ್'ಗಳ ರೋಚಕ ಸೋಲನ್ನನುಭವಿಸಿದೆ.
ಇಲ್ಲಿನ ರಾಜಿವ್ ಗಾಂಧಿ ಮೈದಾನದಲ್ಲಿ ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ನಿಗದಿತ 20 ಓವರ್'ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148ರನ್'ಗಳ ಗೌರವಾನ್ವಿತ ಮೊತ್ತ ಕಲೆಹಾಕಿತು. ಪುಣೆ ಪರ ನಾಯಕ ಸ್ಟೀವ್ ಸ್ಮಿತ್(34), ಬೆನ್ ಸ್ಟೋಕ್ಸ್(39) ಮತ್ತು ಎಂ.ಎಸ್. ಧೋನಿ(31) ರನ್ ಸಿಡಿಸಿ ತಂಡಕ್ಕೆ ನೆರವಾದರು.
ಪುಣೆ ನೀಡಿದ ಗುರಿ ಬೆನ್ನತ್ತಿದ ಆತಿಥೇಯ ಹೈದರಾಬಾದ್ ತಂಡ ಅಷ್ಟೇನು ಉತ್ತಮವಾದ ಆರಂಭವನ್ನು ಪಡೆಯಲಿಲ್ಲ. ಐದನೇ ಓವರ್'ನಲ್ಲೇ ಬೆನ್ ಸ್ಟೋಕ್ಸ್ ತಮ್ಮ ಮೊನಚಾದ ದಾಳಿಯ ಮೂಲಕ ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಪೆವಿಲಿಯನ್'ಗೆ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ಆದರೆ ಮೂರನೇ ವಿಕೆಟ್'ಗೆ ಉತ್ತಮ ಜತೆಯಾಟವಾಡಿದ ವಾರ್ನರ್ ಹಾಗೂ ಯುವರಾಜ್ ಸಿಂಗ್ ಜೋಡಿ ಸಂಕಷ್ಟದಲ್ಲಿದ್ದ ತಂಡವನ್ನು ಕೆಲಕಾಲ ಮೇಲೆತ್ತುವಲ್ಲಿ ಯಶಸ್ವಿಯಾದರು. ಒಂದು ಹಂತದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿದ್ದ ಹೈದರಾಬಾದ್ ತಂಡಕ್ಕೆ ಜಯದೇವ್ ಉನಾದ್ಕಟ್ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ವಾರ್ನರ್(40) ಮತ್ತು ಯುವಿ(47) ವಿಕೆಟ್ ಕೈಚೆಲ್ಲಿದ ಬಳಿಕ ಕೆಳಕ್ರಮಾಂಕದಲ್ಲಿ ತರಗೆಲೆಗಳಂತೆ ಉದುರಿಹೋದ ಹೈದರಾಬಾದ್ ತಂಡ ಕೇವಲ 136ರನ್ ಬಾರಿಸಲಷ್ಟೇ ಶಕ್ತವಾಯಿತು.
ಪುಣೆ ಪರ ಸಂಘಟಿತ ದಾಳಿ ನಡೆಸಿದ ಜಯದೇವ್ ಉನಾದ್ಕಟ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದು ಮಾತ್ರವಲ್ಲದೇ ಐಪಿಎಲ್'ನಲ್ಲಿ ಜೀವನ ಶ್ರೇಷ್ಟ(30/5) ಬೌಲಿಂಗ್ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದರು.
