Asianet Suvarna News Asianet Suvarna News

ಬೆಂಗಳೂರು ಬುಲ್ಸ್'ಗೆ ಪ್ಲೇ ಆಫ್ ಕನಸು ಬಹುತೇಕ ಭಗ್ನ

ಮೊದಲ ಆಲೌಟ್ ಶಾಕ್’ನಿಂದ ಹೊರಬರುವಷ್ಟರಲ್ಲೇ ಬುಲ್ಸ್’ಗೆ ಕಾಶಿಲಿಂಗ್ ಅಡಿಕೆ 18ನೇ ನಿಮಿಷದಲ್ಲಿ ಮತ್ತೊಮ್ಮೆ ಸೂಪರ್ ರೈಡ್ ನಡೆಸಿ ಬುಲ್ಸ್ ಪಡೆಯ ನಾಲ್ಕು ಅಂಕ ದೋಚಿದರು. ಮೊದಲಾರ್ಧ ಮುಕ್ತಾಯವಾದಾಗ ಯು ಮುಂಬಾ 23-13 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಬುಲ್ಸ್ ಪರ ಏಕಾಂಗಿ ಹೋರಾಟ ಮಾಡಿದ ನಾಯಕ ರೋಹಿತ್ ಕುಮಾರ್ ಸೂಪರ್ 10 ಅಂಕ ಕಲೆಹಾಕಿದರು.

U Mumba Beat Bengaluru

ವರದಿ: ನವೀನ್ ಕೊಡಸೆ

ನವದೆಹಲಿ(ಸೆ.28): ತಾರಾ ಆಟಗಾರ ಕಾಶಿಲಿಂಗ್ ಅಡಿಕೆ(17 ಅಂಕ) ಮಿಂಚಿನ ದಾಳಿಗೆ ತತ್ತರಿಸಿದ ಬೆಂಗಳೂರು ಬುಲ್ಸ್—ಅಂಕಗಳ ಅಂತರದಿಂದ ಯು ಮುಂಬಾಗೆ ಶರಣಾಯಿತು.  ಈ ಸೋಲಿನೊಂದಿಗೆ ಬುಲ್ಸ್ ಸತತ 3ನೇ ಸೋಲು ಕಂಡರೆ, ಯು ಮುಂಬಾ ಟೂರ್ನಿಯಲ್ಲಿ 9ನೇ  ಗೆಲುವು ದಾಖಲಿಸಿತು.

ಇಲ್ಲಿನ ತ್ಯಾಗರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗುರುವಾರ ನಡೆದ ಡೆಲ್ಲಿ ಚರಣದ ಕೊನೆಯ ದಿನದ ಅಂತರ ವಲಯದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ನೀರಸ ಪ್ರದರ್ಶನ ತೋರುವುದರೊಂದಿಗೆ ಸೋಲಿಗೆ ಶರಣಾಯಿತು.

ಮೊದಲಾರ್ಧದ 5ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್ 5-3 ಅಂಕಗಳ ಮುನ್ನಡೆ ಸಾಧಿಸಿತ್ತು. 12ನೇ ನಿಮಿಷದಲ್ಲಿ ಕಾಶಿಲಿಂಗ್ ಅಡಿಕೆ ಸೂಪರ್ ರೈಡ್ ನಡೆಸುವ ಮೂಲಕ ಯು ಮುಂಬಾಗೆ 3 ಅಂಕ ತಂದಿತ್ತರು. ಇದರ ಬೆನ್ನಲ್ಲೇ ಹರೀಶ್ ನಾಯ್ಕ್ ಅವರನ್ನು ಟ್ಯಾಕಲ್ ಮಾಡಿದ ಅನೂಪ್ ಪಡೆ 14ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್’ನ್ನು ಆಲೌಟ್ ಮಾಡಿ 7-16ಕ್ಕೆ ಅಂಕ ಹೆಚ್ಚಿಸಿಕೊಂಡಿತು. ಮೊದಲ ಆಲೌಟ್ ಶಾಕ್’ನಿಂದ ಹೊರಬರುವಷ್ಟರಲ್ಲೇ ಬುಲ್ಸ್’ಗೆ ಕಾಶಿಲಿಂಗ್ ಅಡಿಕೆ 18ನೇ ನಿಮಿಷದಲ್ಲಿ ಮತ್ತೊಮ್ಮೆ ಸೂಪರ್ ರೈಡ್ ನಡೆಸಿ ಬುಲ್ಸ್ ಪಡೆಯ ನಾಲ್ಕು ಅಂಕ ದೋಚಿದರು. ಮೊದಲಾರ್ಧ ಮುಕ್ತಾಯವಾದಾಗ ಯು ಮುಂಬಾ 23-13 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಬುಲ್ಸ್ ಪರ ಏಕಾಂಗಿ ಹೋರಾಟ ಮಾಡಿದ ನಾಯಕ ರೋಹಿತ್ ಕುಮಾರ್ ಸೂಪರ್ 10 ಅಂಕ ಕಲೆಹಾಕಿದರು.

ಮೊದಲಾರ್ಧದಲ್ಲೇ ಮತ್ತೊಮ್ಮೆ ಆಲೌಟ್ ಆಗುವ ಭೀತಿಯಲ್ಲಿದ್ದ ಬುಲ್ಸ್ ಪಡೆ ದ್ವಿತಿಯಾರ್ಧದ ಮೂರನೇ ನಿಮಿಷದಲ್ಲೇ ಆಲೌಟ್ ಆಯಿತು. ಈ ವೇಳೆ ಯು ಮುಂಬಾ 29-17 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಬುಲ್ಸ್ ನಾಯಕ ರೋಹಿತ್ ಕುಮಾರ್ ಸತತ ಎರಡು ಬಾರಿ ಸೂಪರ್ ರೈಡಿಂಗ್ ನಡೆಸಿ ಅಂಕಗಳ ಅಂತರವನ್ನು 23-32ಕ್ಕೆ ತಗ್ಗಿಸಿತು. ರೈಡಿಂಗ್’ನಲ್ಲಿ ಬುಲ್ಸ್ ಪದೇ ಪದೇ ತಪ್ಪನ್ನೇ ಮಾಡಿದ ಪರಿಣಾಮ ಪಂದ್ಯ ಮುಕ್ತಾಯಕ್ಕೆ ಕೊನೆ 3 ನಿಮಿಷಗಳಿದ್ದಾಗ ರೋಹಿತ್ ಪಡೆ 26-40 ಅಂಕಗಳ ಹಿನ್ನಡೆ ಅನುಭವಿಸಿತು. ಅಂತಿಮವಾಗಿ ಬುಲ್ಸ್ 30-42 ಅಂಕಗಳೊಂದಿಗೆ ಶರಣಾಗುವುದರೊಂದಿಗೆ ಪ್ಲೇ ಆಫ್ ಪ್ರವೇಶಿಸುವ ಕನಸು ಬಹುತೇಕ ಭಗ್ನವಾದಂತೆಯಾಗಿದೆ.

ಟರ್ನಿಂಗ್ ಪಾಯಿಂಟ್

ಮೊದಲ ಅವಧಿಯ ಆರಂಭದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿತ್ತು. ಈ ವೇಳೆ ಕಾಶಿಲಿಂಗ್ ಅಡಿಕೆ ಸೂಪರ್ ರೈಡ್ ಮೂಲಕ ಒಮ್ಮೆ 3 ಹಾಗೂ ಮತ್ತೊಮ್ಮೆ 4 ಅಂಕ ಪಡೆದು ಯು ಮುಂಬಾಗೆ ಬೃಹತ್ ಮುನ್ನಡೆ ತಂದುಕೊಟ್ಟರು. ಅಲ್ಲಿಂದ ಅನೂಪ್ ಪಡೆ ಹಿಂದೆ ತಿರುಗಿ ನೋಡಲಿಲ್ಲ.

ಶ್ರೇಷ್ಠ ರೈಡರ್: ಕಾಶಿಲಿಂಗ್ ಅಡಿಕೆ(17 ಅಂಕ)- ಯು ಮುಂಬಾ

ಶ್ರೇಷ್ಠ ಡಿಫೆಂಡರ್:ಸುರೀಂದರ್ ಸಿಂಗ್(6 ಅಂಕ)-ಯು ಮುಂಬಾ

 

Follow Us:
Download App:
  • android
  • ios