ನವದೆಹಲಿ(ಸೆ.19): ಇದೇ ತಿಂಗಳ 29ಕ್ಕೆ ತೆರೆಗೆ ಬರಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ ‘ಎಂ.ಎಸ್. ಧೋನಿ- ದ ಅನ್ ಟೋಲ್ಟ್ ಸ್ಟೋರಿ’ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಹೇಳಿದ್ದ ಮಾತೊಂದು ವಿವಾದಕ್ಕೀಡಾಗಿದೆ.

‘‘ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅದೆಷ್ಟೋ ಜನರಿದ್ದಾರೆ. ಈ ಹಿಂದೆಯೂ ಅಂಥ ಮಹನೀಯರು ನಾಡಿನ ಸೇವೆಗೈದಿದ್ದರು. ಅಂಥವರ ಬಗ್ಗೆ ಚಿತ್ರಗಳನ್ನು ಮಾಡಿದರೆ ನಿಜಕ್ಕೂ ಉತ್ತಮವಾಗಿರುತ್ತದೆ’’ ಎಂದು ಗಂಭೀರ್ ಹೇಳಿದ್ದರು.

ಕೆಲ ದಿನಗಳಿಂದ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಅವರ ನಡುವಿನ ಬಾಂಧವ್ಯ ಅಷ್ಟು ಸರಿಯಿಲ್ಲ. ಅದಲ್ಲದೆ, ನ್ಯೂಜಿಲೆಂಡ್ ವಿರುದ್ಧ ಸೆ. 22ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಗಾಗಿ ಪ್ರಕಟಗೊಂಡ ಭಾರತ ತಂಡದಿಂದ ಗಂಭೀರ್ ಅವರನ್ನು ಕೈಬಿಡಲಾಗಿದೆ. ಹಾಗಾಗಿಯೇ, ಗಂಭೀರ್ ಅವರು ಧೋನಿ ಜೀವನಾಧಾರಿತ ಸಿನಿಮಾ ಬರುವ ಈ ಹೊತ್ತಿನಲ್ಲಿ ಇಂಥ ಹೇಳಿಕೆ ನೀಡಿದ್ದಾರೆಂದು ಟ್ವೀಟರ್‌ನಲ್ಲಿ ಹಲವರು ದೂರಿದ್ದಾರೆ.

‘ಪ್ರಿಯ ಗಂಭೀರ್ ಅವರೇ, ಕೈಗೆ ಸಿಗದ ದ್ರಾಕ್ಷಿ ಹುಳಿಯೇ?’ ಎಂದು ರೋಫಿಲ್ ಎಂಬುವರು ಕಿಚಾಯಿಸಿದ್ದರೆ, ‘ಗೌತಮ್, ನಿಮಗೆ ಬರ್ನಾಲ್‌ನ (ಸುಟ್ಟ ಗಾಯಗಳಿಗೆ ಹಚ್ಚುವ ಮುಲಾಮು) ಅಗತ್ಯವಿದೆ ಎಂದು ಹ್ಯೂಮರ್ ಸಿಲ್ಲಿ ಎಂಬ ಹೆಸರಿಟ್ಟುಕೊಂಡವರು ಹೇಳಿದ್ದಾರೆ. ಶಮನ್ ಅಗ್ನಿಹೋತ್ರಿ ಎಂಬುವರು, ಗೌತಮ್ ಅವರೇ ನಿಮಗೆ ಇಂಥ ಬುದ್ಧಿಯಿರುವುದರಿಂದಲೇ ನಿಮ್ಮ ಹತ್ತಾರು ಸೊಗಸಾದ ಇನಿಂಗ್ಸ್‌ಗಳ ಹೊರತಾಗಿಯೂ ನಿಮ್ಮನ್ನು ಯಾರೂ ನೆನಪಿಟ್ಟುಕೊಂಡಿಲ್ಲ’’ ಎಂದಿದ್ದಾರೆ. ಹೀಗೆ, ಟ್ವೀಟರ್‌ನಲ್ಲಿ ಗಂಭೀರ್ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.