ಮಾಸ್ಕೋ[ಜು.16]: 2018ನೇ ಸಾಲಿನ ಫಿಫಾ ವಿಶ್ವಕಪ್ ಫೈನಲ್’ನಲ್ಲಿ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿದ ಫ್ರಾನ್ಸ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. 20 ವರ್ಷಗಳ ಬಳಿಕ ಅಂದರೆ 1998ರ ನಂತರ ಎರಡನೇ ಬಾರಿಗೆ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.   

ವಿಶ್ವಕಪ್’ನ ಫೈನಲ್’ನಲ್ಲಿ ಈ ಬಾರಿ ಫ್ರಾನ್ಸ್ ಆಟಗಾರರಿಗಿಂತ ಹೆಚ್ಚು ಗಮನ ಸೆಳೆದದ್ದು, ಫ್ರಾನ್ಸ್ ಅಧ್ಯಕ್ಷ  ಎಮಾನುಯಲ್ ಮ್ಯಾಕ್ರೋನ್. ಫ್ರಾನ್ಸ್ ಆಟಗಾರರು ಪ್ರತಿ ಬಾರಿ ಗೋಲು ಬಾರಿಸಿದಾಗಲೂ ಗ್ಯಾಲರಿಯಲ್ಲಿ ಕುಳಿತಿದ್ದ 40 ವರ್ಷದ ಎಮಾನುಯಲ್ ಮ್ಯಾಕ್ರೋನ್ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.

ಪಂದ್ಯದ ಬಳಿಕ ಶಿಷ್ಟಾಚಾರವನ್ನು ಬದಿಗೊತ್ತಿ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಫ್ರಾನ್ಸ್ ಅಧ್ಯಕ್ಷರ ಈ ಕ್ರೀಡಾಸ್ಪೂರ್ತಿಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ.