ವಿಶ್ವದ ಟೆನಿಸ್ ಆಟಗಾರರು ಗ್ರ್ಯಾನ್‌ಸ್ಲಾಂ ಟೂರ್ನಿಗಳ ಮುಖ್ಯಸ್ಥರಿಗೆ ಪತ್ರ ಬರೆದು ಬಹುಮಾನ ಮೊತ್ತ ಹೆಚ್ಚಳ, ಆಟಗಾರರ ಕಲ್ಯಾಣಕ್ಕೆ ಹೆಚ್ಚಿನ ಹಣ, ಹಾಗೂ ಟೂರ್ನಿ ನಿರ್ಧಾರಗಳಲ್ಲಿ ಹೆಚ್ಚಿನ ಅಧಿಕಾರ ನೀಡುವಂತೆ ಒತ್ತಾಯಿಸಿದ್ದಾರೆ. ಪ್ರಮುಖ ಆಟಗಾರರು ಸಹಿ ಹಾಕಿರುವ ಈ ಪತ್ರದಲ್ಲಿ, ಟೂರ್ನಿಗಳಿಂದ ಬರುವ ಆದಾಯದಲ್ಲಿ ಆಟಗಾರರಿಗೆ ಹೆಚ್ಚಿನ ಪಾಲು ನೀಡಬೇಕೆಂದು ಕೋರಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆನಿಸ್ ಟೂರ್ನಿಯಲ್ಲಿ ಪ್ರಜ್ವಲ್ ದೇವ್ ಡಬಲ್ಸ್ ಫೈನಲ್ ತಲುಪಿದ್ದಾರೆ.
ವಾಷಿಂಗ್ಟನ್: ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಬಹುಮಾನ ಮೊತ್ತ ಹೆಚ್ಚಳ ಹಾಗೂ ಟೂರ್ನಿ, ಆಟಗಾರರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಹೆಚ್ಚಿನ ಅಧಿಕಾರ ಸೇರಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ವಿಶ್ವದ ದಿಗ್ಗಜ ಟೆನಿಸಿಗರು 4 ಗ್ರ್ಯಾನ್‌ಸ್ಲಾಂ ಟೂರ್ನಿಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಟೂರ್ನಿಗಳಿಂದ ಹೆಚ್ಚಿನ ಆದಾಯ ಬರುತ್ತಿದೆ. ಆದರೆ ಆಟಗಾರರಿಗೆ ಸಣ್ಣ ಪಾಲನ್ನು ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಬಹುಮಾನ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪುರುಷ, ಮಹಿಳಾ ವಿಭಾಗಗಳ ವಿಶ್ವ ರ್ಯಾಂಕಿಂಗ್‌ನ ತಲಾ ಅಗ್ರ-10ರಲ್ಲಿರುವ ಪ್ರಮುಖ ಟೆನಿಸಿಗರು ಈ ಪತ್ರಕ್ಕೆ ಸಹಿಹಾಕಿದ್ದಾರೆ. ಜೋಕೋವಿಚ್, ಅರೈನಾ ಸಬಲೆಂಕಾ, ಯಾನಿಕ್ ಸಿನ್ನರ್, ಡ್ಯಾನಿಲ್ ಮೆಡೈಡೆವ್, ಇಗಾ ಸ್ವಿಯಾಟೆಕ್, ಕೊಕೊ ಗಾಫ್, ಜೆರೆವ್, ರುಬ್ಲೆವ್, ಜೆಸ್ಸಿಕಾ ಪೆಗುಲಾ ಸೇರಿದಂತೆ ಒಟ್ಟು 20 ಮಂದಿ ಈ ಪತ್ರ ಬರೆದಿದ್ದಾರೆ. ಇವರಲ್ಲಿ 15 ಮಂದಿ ಕನಿಷ್ಠ ಒಂದು ಗ್ರ್ಯಾನ್‌ಸ್ಲಾಂ ವಿಜೇತರು ಅಥವಾ ಗ್ರ್ಯಾನ್‌ಸ್ಲಾಂ ಫೈನಲ್ ಆಡಿದವರು.
ಸದ್ಯ ಯುಎಸ್ ಓಪನ್‌ನಲ್ಲಿ ₹640 ಕೋಟಿ, ವಿಂಬಲ್ಡನ್‌ನಲ್ಲಿ ₹546 ಕೋಟಿ, ಫ್ರೆಂಚ್ ಓಪನ್ ಹಾಗೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಲಾ ₹495 ಕೋಟಿ ಬಹುಮಾನ ಮೊತ್ತ ನೀಡಲಾಗುತ್ತಿದೆ.
ಟೆನಿಸಿಗರ 3 ಬೇಡಿಕೆಗಳು
1. ಗ್ರ್ಯಾನ್‌ಸ್ಲಾಂ ಟೆನಿಸಿಗರ ಕಲ್ಯಾಣ ಕಾರ್ಯಕ್ಕೆ ಹೆಚ್ಚಿನ ಹಣಕಾಸು ಸಹಾಯ ನೀಡಬೇಕು.
2. ಟೆನಿಸ್ ಗ್ರ್ಯಾನ್‌ಸ್ಲಾಂ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಿಸಬೇಕು.
3. ಟೂರ್ನಿ, ಆಟಗಾರರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಹೆಚ್ಚಿನ ಅಧಿಕಾರ.
ರಾಜ್ಯದ ಪ್ರಜ್ವಲ್ ಡಬಲ್ಸ್ ಫೈನಲ್‌ಗೆ
ಬೆಂಗಳೂರು: ಎಸ್.ಎಂ. ಕೃಷ್ಣ ಸ್ಮರಣಾರ್ಥವಾಗಿ ನಗರದಲ್ಲಿ ನಡೆಯುತ್ತಿರುವ ಪುರುಷರ ಟೆನಿಸ್ ಟೂರ್ನಿಯಲ್ಲಿ ಕರ್ನಾಟಕದ ಪ್ರಜ್ವಲ್ ದೇವ್ ಹಾಗೂ ಪಶ್ಚಿಮ ಬಂಗಾಳದ ನಿತಿನ್ ಕುಮಾರ್ ಸಿನ್ಹಾ ಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ಭಾರತೀಯ ಜೋಡಿ, ಮನೀಶ್ ಸುರೇಶ್‌ಕುಮಾರ್-ಪರೀಕ್ಷಿತ್ ಸೊಮಾನಿ ವಿರುದ್ಧ 6-0, 7-6(5) ಸೆಟ್‌ಗಳಲ್ಲಿ ಗೆಲುವು ಸಾಧಿಸಿತು. ಶನಿವಾರ ಫೈನಲ್‌ನಲ್ಲಿ ಅಮೆರಿಕದ ನಿಕ್ ಚಾಪೆಲ್-ಕಜಕಸ್ತಾನದ ಗ್ರಿಕೋರಿ ಲೊಮಾಕಿನ್ ಸವಾಲು ಎದುರಾಗಲಿದೆ.
ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಚಿರಾಗ್ ದುಹಾನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಭಾರತದವರೇ ಆದ ಇಶಾಕ್ ಇಕ್ಬಾಲ್ ವಿರುದ್ಧ 6-2, 7-6(1) ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದು ಐಟಿಎಫ್ ಎಂ25 ಹಂತದಲ್ಲಿ ಚಿರಾಗ್‌ಗೆ ಮೊದಲ ಸೆಮಿಫೈನಲ್‌ನಲ್ಲಿ. ಇನ್ನು, ಕರಣ್ ಸಿಂಗ್ ಅಗ್ರ ಶ್ರೇಯಾಂಕಿತ, ಗ್ರೇಟ್ ಬ್ರಿಟನ್‌ನ ಜೇ ಕ್ಲಾರ್ಕ್ ವಿರುದ್ಧ ಸೋತು ಹೊರಬಿದ್ದರು. ಆರ್ಯನ್ ಶಾ ಗ್ರೇಟ್ ಬ್ರಿಟನ್‌ನ ಓಲಿವರ್ ಕ್ರಾಫೊರ್ಡ್‌ಗೆ ಶರಣಾಗಿ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿದರು.
