ಸಚಿನ್, ಧೋನಿ, ದ್ರಾವಿಡ್'ರನ್ನು ಮೀರಿಸುವ ಕ್ರಿಕೆಟಿಗ ಕೊಹ್ಲಿ: ಶ್ರೇಷ್ಠ ಕ್ರಿಕೆಟಿಗನನ್ನು ಹೊಗಳಿದ ಮತ್ತೊಬ್ಬ ಶ್ರೇಷ್ಠ

sports | Wednesday, February 21st, 2018
Suvarna Web Desk
Highlights

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ 2-1 ಅಂತರದಿಂದ ಟೆಸ್ಟ್ ಸರಣಿ ಸೋತಿದ್ದರೂ 5-1 ಅಂತರದಲ್ಲಿ ಏಕದಿನ ಸರಣಿಯನ್ನು ಜಯಗಳಿಸಿದೆ.

ನವದೆಹಲಿ(ಫೆ.21): ಭಾರತದಲ್ಲಿ ಮಾತ್ರ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರುತ್ತದೆ ಎಂಬುವುದನ್ನು ವಿರಾಟ್ ಕೊಹ್ಲಿ ಸುಳ್ಳು ಮಾಡಿದ್ದಾರೆ. 29 ವರ್ಷದ ರನ್ ಮಷಿನ್ ಭಾರತ ಕ್ರಿಕೆಟ್ ತಂಡದ ಸಾರಥ್ಯ ವಹಿಸಿದ ಮೇಲೆ ಸೋಲು ಎನ್ನುವುದು ಅಪರೂಪವಾಗುತ್ತಿದೆ.

ಎಷ್ಟೆ ಬಲಿಷ್ಟ ತಂಡ ಹೊಂದಿದರೂ ಭಾರತ ತಂಡ ವಿದೇಶಗಳಲ್ಲಿ ಜಯ ಗಳಿಸುತ್ತಿದ್ದದ್ದು ಕೆಲವು ಸಂದರ್ಭಗಳಲ್ಲಿ ಮಾತ್ರ. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ ಮೇಲೆ ಯಾವುದೇ ರಾಷ್ಟ್ರದ ಪ್ರವಾಸ ಕೈಗೊಂಡರೂ ಗೆಲುವು ಸಾಮಾನ್ಯವಾಗಿಬಿಟ್ಟಿದೆ.

ಕೇವಲ ಗೆಲುವು ತಂದುಕೊಡುವುದು ಮಾತ್ರವಲ್ಲ ಶತಕ, ಅರ್ಧ ಶತಕಗಳ ಸುರಿಮಳೆಯನ್ನೆ ಹರಿಸುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ 100 ಶತಕವನ್ನು ದಾಟಿರುವ ಸಚಿನ್ ಅವರ ದಾಖಲೆಯನ್ನು ಮುರಿದರೂ ಅಚ್ಚರಿಯಿಲ್ಲ. ಐಸಿಸಿ ರಾಂಕಿಂಗ್'ನ ಇತಿಹಾಸದಲ್ಲಿ ಟೆಸ್ಟ್ ಹಾಗೂ ಏಕದಿನದಲ್ಲಿ 900 ಅಂಕಗಳನ್ನು ಮುಟ್ಟಿದ ಏಕೈಕ ಆಟಗಾರ ಕೊಹ್ಲಿ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ 2-1 ಅಂತರದಿಂದ ಟೆಸ್ಟ್ ಸರಣಿ ಸೋತಿದ್ದರೂ 5-1 ಅಂತರದಲ್ಲಿ ಏಕದಿನ ಸರಣಿಯನ್ನು ಜಯಗಳಿಸಿದೆ. ಟಿ20 ಯಲ್ಲೂ ಕೂಡ ಮೊದಲ ಪಂದ್ಯ ಗೆದ್ದು ಸರಣಿ ಜಯಗಳಿಸುವತ್ತ ಹೆಜ್ಜೆ ಇಟ್ಟಿದೆ.

ನಿಜವಾದ ಶ್ರೇಷ್ಠ ಕ್ರಿಕೆಟಿಗ ಕೊಹ್ಲಿ

ಕೊಹ್ಲಿಯ ಶ್ರೇಷ್ಠತೆಯ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 'ಭಾರತ ಕ್ರಿಕೆಟ್'ನ ಧ್ವಜ ಎತ್ತಿಹಿಡಿಯುವ ಏಕೈಕ ಕ್ರಿಕೆಟಿಗ ಕೊಹ್ಲಿ ಮಾತ್ರ. ನನ್ನನ್ನು ಒಳಗೊಂಡು ದ್ರಾವಿಡ್, ಸಚಿನ್ ಯಶಸ್ಸು ಹಾಗೂ ಅದೃಷ್ಟದಿಂದ ಓಡುತ್ತಿದ್ದವರು. ಆದರೆ ಕೊಹ್ಲಿ ಆ ರೀತಿ ಓಡುವರಲ್ಲ. ಅವರು ನಿಜವಾದ ಶ್ರೇಷ್ಠ ಸಾಧಕ' ಎಂದು ಬಣ್ಣಿಸಿದರು.

ಧೋನಿ, ದ್ರಾವಿಡ್ ನಾಯಕತ್ವವನ್ನು ನೋಡಿದ್ದೇನೆ. ಸತತ ಪ್ರದರ್ಶನದ ಜೊತೆ ತಂಡವನ್ನು ಗೆಲ್ಲಿಸುತ್ತಿರುವ ಕೊಹ್ಲಿ ಸಾಧನೆ ಅಮೋಘ. ಮುಂದಿನ ದಿನಗಳಲ್ಲಿ ನಡೆಯುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಯಲ್ಲಿಯೂ ಕೊಹ್ಲಿ ನಾಯಕತ್ವದಲ್ಲಿ ಭಾರತ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ತಿಳಿಸಿದರು.

Comments 0
Add Comment