ಕೊಲೊಂಬೋ(ಜು.30): ಶ್ರೀಲಂಕಾ ಪುಟ್ಟ ರಾಷ್ಟ್ರವಾದರೂ ಕ್ರಿಕೆಟ್‌ನಲ್ಲಿನ ಸಾಧನೆ ದೊಡ್ಡದು. 1996ರಲ್ಲಿ ವಿಶ್ವಕಪ್ ಪ್ರಶಸ್ತಿ ಗೆಲ್ಲೋ ಮೂಲಕ ಕ್ರಿಕೆಟ್ ಸಾಮ್ರಾಜ್ಯವನ್ನ ಆಳಿದ ರಾಷ್ಟ್ರ. ದಿಗ್ಗಜ ಕ್ರಿಕೆಟಗರನ್ನ ನೀಡಿದ ಹೆಗ್ಗಳಿಕೆಯೂ ಲಂಕಾ ಬೆನ್ನಿಗಿದೆ.

ಲಂಕಾ ಕ್ರಿಕೆಟ್ ಇತಿಹಾಸದಲ್ಲಿ 1996ರ ವಿಶ್ವಕಪ್ ಗೆಲುವು ಐತಿಹಾಸಿಕ ಸಾಧನೆ. ಆದರೆ ಇದೀಗ ಇದೇ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಅರ್ಜುನ್ ರಣತುಂಗಾ ಹಾಗೂ ಉಪನಾಯಕ ಅರವಿಂದ ಡಿಸಿಲ್ವ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ.

ಲಂಕಾ ದಿಗ್ಗಜ ಕ್ರಿಕೆಟಿಗರ ಮೇಲೆ ಆರೋಪ ಮಾಡಿದ್ದು ಬೇರೆ ಯಾರು ಅಲ್ಲ, ಲಂಕಾ ಕ್ರಿಕೆಟ್ ಮಂಡಳಿ ಮಾಜಿ ಅಧ್ಯಕ್ಷ, 1996ರ ವಿಶ್ವಕಪ್ ವಿಜೇತ ತಂಡದ ಸದಸ್ಯ ತಿಲಂಗ ಸುಮಂತಿಪಾಲ. ಇದೇ ಕಾರಣಕ್ಕೆ ಇದೀಗ ಲಂಕಾ ಮ್ಯಾಚ್ ಫಿಕ್ಸಿಂಗ್ ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆ ಇದೆ.

ಅರ್ಜುನ್ ರಣತುಂಗ ಹಾಗೂ ಅರವಿಂದ್ ಡಿಸಿಲ್ವ ಬುಕ್ಕಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಗುಪ್ತ ಅನ್ನೋ ಬುಕ್ಕಿಯಿಂದ ಇವರಿಬ್ಬರು ಬರೋಬ್ಬರಿ 1 ಕೋಟಿ ರೂಪಾಯಿ ಹಣ ಪಡೆದಿದರು ಎಂದು ತಿಲಂಗ ಆರೋಪಿಸಿದ್ದಾರೆ. 

ಲಂಕಾ ಕ್ರಿಕೆಟ್‌‍ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರಂಭಿಸಿದ್ದೇ ಅರ್ಜುನ್ ಹಾಗೂ ಅರವಿಂದ. ಈ ಕುರಿತು ಸಾಕಷ್ಟು ಬಾರಿ ತನಿಖೆಗೆ ಆಗ್ರಹಿಸಿದ್ದೇನೆ. ಆದರೆ ಯಾರೂ ಕೂಡ ಗಮನ ನೀಡಿಲ್ಲ ಎಂದು ತಿಲಂಗ ಹೇಳಿದ್ದಾರೆ. ಈ ಹಿಂದೆ ತಿಲಂಗ ಸುಮಂತಿಪಾಲ ವಿರುದ್ದ ಅರ್ಜುನ್ ರಣತುಂಗಾ ಕೂಡ ಫಿಕ್ಸಿಂಗ್ ಆರೋಪ ಮಾಡಿದ್ದರು.

ತಿಲಂಗ ಸುಮಂತಿಪಾಲ ಕುಟುಂಬಸ್ಥರು ಬುಕ್ಕಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಈ ಹಿಂದೆ ಅರ್ಜುನ್ ರಣತುಂಗಾ ಆರೋಪಿಸಿದ್ದರು. ಇದೀಗ ಸುಮಂತಿಪಾಲ ಪ್ರತ್ಯಾರೋಪ ಮಾಡಿದ್ದಾರೆ. ಆದರೆ ನಿಜಕ್ಕೂ ಶ್ರೀಲಂಕಾ ಕ್ರಿಕೆಟ್‍‌‌ಗೆ ಫಿಕ್ಸಿಂಗ್ ಭೂತ ಆವರಿಸಿದೆಯಾ ಅನ್ನೋದು ತನಿಖೆಯಿಂದಷ್ಟೇ ಹೊರಬರಬೇಕಿದೆ.