ನವದೆಹಲಿ(ಆ.11): ಪ್ರಧಾನಿ ನರೇಂದ್ರ ಮೋದಿಯ ಕನಸಿನ ಯೋಜನೆ 'ಒಲಿಂಪಿಕ್ಸ್ ಟಾಸ್ಕ್ ಫೋರ್ಸ್'(ಒಟಿಎಫ್)ನ ಸಲಹೆ-ಸುಧಾರಣೆಗಳನ್ನೊಳಗೊಂಡ ಅಂತಿಮ ರೂಪುರೇಷೆಗಳನ್ನು ಸಮಿತಿ ಇಂದು ಸರ್ಕಾರಕ್ಕೆ ಸಲ್ಲಿಸಿದೆ.

ಮುಂದಿನ ಮೂರು ಒಲಿಂಪಿಕ್ಸ್'ಗಳನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಸೌಕರ್ಯ, ತರಬೇತಿ ಹಾಗೂ ಅಥ್ಲೀಟ್'ಗಳ ಆಯ್ಕೆ ಮುಂತಾದ ವಿಷಯಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಸೇರಿದಂತೆ 8 ಸದಸ್ಯರನ್ನೊಳಗೊಂಡ ಸಮಿತಿಯು ಕೇಂದ್ರ ಕ್ರೀಡಾ ಕಾರ್ಯದರ್ಶಿಯಾದ ಇನ್ಜಿತಿ ಶ್ರೀನಿವಾಸ್ ಅವರಿಗೆ ಸಲ್ಲಿಸಿದೆ.

2020ರ ಟೋಕಿಯೊ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ವರದಿಯನ್ನು ಸಿದ್ದಪಡಿಸಲಾಗಿದೆ. ಇದೊಂದು ದೀರ್ಘಾವಧಿ ಅಭಿವೃದ್ದಿ ಯೋಜನೆಯ ಅಡಿಗಲ್ಲು ಆಗಿದ್ದು, ಟೋಕಿಯೊ ಒಲಿಂಪಿಕ್ಸ್ ಮಾತ್ರವಲ್ಲದೇ 2024 ಹಾಗೂ 2028ರ ಒಲಿಂಪಿಕ್ಸ್'ನಲ್ಲೂ ಉತ್ತಮ ಗುರಿ ಸಾಧಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (SAI- ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಟ್ವೀಟ್ ಮಾಡಿದೆ.

2016ರ ರಿಯೊ ಒಲಿಂಪಿಕ್ಸ್'ನಲ್ಲಿ ಭಾರತದಿಂದ 118 ಅಥ್ಲೀಟ್'ಗಳು ಪಾಲ್ಗೊಂಡಿದ್ದರು. ಆದರೆ ಭಾರತಕ್ಕೆ ದಕ್ಕಿದ್ದು ಮಾತ್ರ ಕೇವಲ ಒಂದು ಬೆಳ್ಳಿ ಹಾಗೂ ಒಂದು ಕಂಚು ಮಾತ್ರ. ಭಾರತದ ಸಾಧನೆಯು ಕ್ರೀಡಾ ಮೂಲಭೂತ ಸೌಕರ್ಯಗಳ ಕೊರತೆ, ತರಬೇತಿಯ ಕೊರತೆ ಮುಂತಾದವುಗಳ ಬಗ್ಗೆ ಹೆಚ್ಚು ಗಮನ ಸೆಳೆದಿತ್ತು.