‘ಪ್ರತಿ ಬಾರಿ ಅಭ್ಯಾಸಕ್ಕೆ ತೆರಳಬೇಕಿದ್ದರೂ ತಂದೆಯ ಅನುಮತಿ ಬೇಕು. ನಾವು ವಾಸಿಸುವ ಸ್ಥಳದ ಸುತ್ತಮುತ್ತ ಯಾವುದೇ ಶುಭ-ಅಶುಭ ಕಾರ್ಯಗಳಿಗೆ ನಾನೇ ತೆರಳಿ ಪ್ರಾರ್ಥನೆ ಸಲ್ಲಿಸಬೇಕು. ಕೆಲಸದ ಕಡೆಗೇ ಹೆಚ್ಚು ಗಮನ ನೀಡಬೇಕಿದ್ದು, ಕಬಡ್ಡಿಗೆ 2ನೇ ಪ್ರಾಶಸ್ತ್ಯ’ ಎಂದು ಟಕಮಿಟ್ಸು ‘ಕನ್ನಡಪ್ರಭ’ದೊಂದಿಗೆ ಮಾತನಾಡುತ್ತಾ ಹೇಳಿದರು.

ಧನಂಜಯ್ ಎಸ್ ಹಕಾರಿ, ಲಖನೌ

ಬೌಧ ಧರ್ಮದ ಸ್ಥಾಪಕ ಗೌತಮ ಬುದ್ಧ ಸಹ ಕಬಡ್ಡಿ ಆಡುತ್ತಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಹಲವು ಶತಮಾನಗಳ ಬಳಿಕ ಅವರ ಅನುಯಾಯಿಯೊಬ್ಬ ಕಬಡ್ಡಿ ಕ್ರೀಡೆಯಲ್ಲಿ ಉನ್ನತ ಮಟ್ಟಕ್ಕೇರಿದ್ದಾನೆ. ಆತನೇ ಜಪಾನ್‌'ನ ಟಕಮಿಟ್ಸು ಕೊನೊ.

ಟಕಮಿಟ್ಸು ಒಬ್ಬ ಬೌದ್ಧ ಬಿಕ್ಕು(ಸನ್ಯಾಸಿ). ಅವರ ಕುಟುಂಬದಲ್ಲಿ ಕೊನೊ ಮೂರನೇ ತಲೆಮಾರಿನ ಸನ್ಯಾಸಿ. 20ನೇ ವಯಸ್ಸಿನಲ್ಲಿ ತೈಶೋ ವಿವಿಯಲ್ಲಿ ಬೌದ್ಧ ಧರ್ಮದಲ್ಲಿ ಪದವಿ ಪಡೆದ ಬಳಿಕ ಟೊಕಿಯೊ ಬಳಿಯ ಸೈತಾಮ ನಗರದಲ್ಲಿರುವ ಬೌದ್ಧ ದೇವಸ್ಥಾನದಲ್ಲಿ ಸನ್ಯಾಸಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶಾಲಾ ದಿನಗಳಲ್ಲಿ ರಗ್ಬಿ ಆಟವಾಡುತ್ತಿದ್ದ ಟಕಮಿಟ್ಸು ಕೆಲ ವರ್ಷಗಳ ಹಿಂದಷ್ಟೇ ಕಬಡ್ಡಿ ಆಟದಿಂದ ಆಕರ್ಷಿತರಾಗಿ ಇತ್ತ ಕಡೆ ವಾಲಿದ್ದಾರೆ. ಪ್ರೊ ಕಬಡ್ಡಿ ಲೀಗ್‌'ನ ಮೊದಲ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ತಂಡದಲ್ಲಿದ್ದ ಟಕಮಿಟ್ಸು, ಕಳೆದ ವರ್ಷ ಅಹಮದಾಬಾದ್‌'ನಲ್ಲಿ ನಡೆದಿದ್ದ ಕಬಡ್ಡಿ ವಿಶ್ವಕಪ್ ವೇಳೆ ಜಪಾನ್ ಪರ ಬಲಕಾರ್ನರ್ ಆಟಗಾರನಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ವಿಶೇಷ ಎಂದರೆ ಟಕಮಿಟ್ಸು ಅವರ ತಂದೆ ಜಪಾನ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ. ಆದರೂ ಕಬಡ್ಡಿಯಲ್ಲಿ ತೊಡಗಿಸಿಕೊಳ್ಳುವುದು ಟಕಮಿಟ್ಸುಗೆ ಸುಲಭದ ಕೆಲಸವಲ್ಲ. ‘ಪ್ರತಿ ಬಾರಿ ಅಭ್ಯಾಸಕ್ಕೆ ತೆರಳಬೇಕಿದ್ದರೂ ತಂದೆಯ ಅನುಮತಿ ಬೇಕು. ನಾವು ವಾಸಿಸುವ ಸ್ಥಳದ ಸುತ್ತಮುತ್ತ ಯಾವುದೇ ಶುಭ-ಅಶುಭ ಕಾರ್ಯಗಳಿಗೆ ನಾನೇ ತೆರಳಿ ಪ್ರಾರ್ಥನೆ ಸಲ್ಲಿಸಬೇಕು. ಕೆಲಸದ ಕಡೆಗೇ ಹೆಚ್ಚು ಗಮನ ನೀಡಬೇಕಿದ್ದು, ಕಬಡ್ಡಿಗೆ 2ನೇ ಪ್ರಾಶಸ್ತ್ಯ’ ಎಂದು ಟಕಮಿಟ್ಸು ‘ಕನ್ನಡಪ್ರಭ’ದೊಂದಿಗೆ ಮಾತನಾಡುತ್ತಾ ಹೇಳಿದರು.

ನನಗೆ ನಾನೇ ಫಿಸಿಯೋ : ಕ್ರೀಡಾಪಟುವಾದವನು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ನಾನೇ ಸ್ವತಃ ಆಹಾರ ಕ್ರಮವನ್ನು ಹಾಕಿಕೊಂಡಿದ್ದೇನೆ. ಭಾರತದಲ್ಲಿನ ಆಹಾರ ಹೆಚ್ಚು ಖಾರವಿರುತ್ತದೆ. ಹೀಗಾಗಿ ಕಡಿಮೆ ಆಹಾರ ಸೇವಿಸುತ್ತೇನೆ. ಪ್ರೋಟಿನ್'ಯುಕ್ತ ಆಹಾರ ತಿನ್ನಲು ಇಷ್ಟಪಡುತ್ತೇನೆ. ಕೊಬ್ಬಿನಂಶವಿರುವ ಆಹಾರ ಸೇವಿಸುವುದಿಲ್ಲ. ಆಹಾರವನ್ನು ಇಂತಿಷ್ಟು ಗ್ರಾಂಗಳಲ್ಲಿ ಲೆಕ್ಕ ಮಾಡಿಯೇ ಸೇವಿಸುತ್ತೇನೆ.

ಕಬಡ್ಡಿಗಾಗಿ ಮಾಂಸ ಸೇವನೆ: ಕೇವಲ ಸನ್ಯಾಸಿಯಾಗಿದ್ದಾಗ ನಾನು ಮಾಂಸಹಾರ ಸೇವಿಸುತ್ತಿರಲಿಲ್ಲ. ಶುದ್ಧ ಶಾಖಾಹಾರಿಯಾಗಿದ್ದೆ. ಆದರೆ ಕಬಡ್ಡಿ ಆಟಕ್ಕೆ ದೈಹಿಕ ಸಾಮರ್ಥ್ಯ ಅವಶ್ಯಕವಾಗಿದೆ. ಹೀಗಾಗಿ ಮಾಂಸಾಹಾರವನ್ನು ಸೇವಿಸಲು ಶುರು ಮಾಡಿದ್ದೇನೆ ಎನ್ನುತ್ತಾರೆ ಟಕಮಿಟ್ಸು.